ನಿರ್ಮಲಾ ಸೀತಾರಾಮನ್ ಗೆ ಕ್ಷಮೆಯಾಚಿಸಿದ ಅನ್ನಪೂರ್ಣ ರೆಸ್ಟೋರೆಂಟ್ ಮಾಲಕ; ವಿಡಿಯೋ ವೈರಲ್

Update: 2024-09-13 11:01 GMT

PC : indiatoday.in

ಹೊಸದಿಲ್ಲಿ: ಅನ್ನಪೂರ್ಣ ರೆಸ್ಟೋರೆಂಟ್ ಮಾಲಕ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಬಳಿ ಕ್ಷಮೆ ಯಾಚಿಸಿದ ಬೆನ್ನಲ್ಲಿ ಮೋದಿ ಸರಕಾರದ ವಿರುದ್ಧ ರಾಹುಲ್ ಗಾಂಧಿ ಟೀಕೆಯನ್ನು ಮಾಡಿದ್ದು, 'ಸಣ್ಣ ವ್ಯಾಪರಿಗಳಿಗೆ ಅವಮಾನ ಸಲ್ಲದು' ಎಂದು ಹೇಳಿದ್ದಾರೆ.

ಜಿಎಸ್ಟಿ ಸರಳೀಕರಣಕ್ಕೆ ತಮಿಳುನಾಡಿನ ಕೊಯಮತ್ತೂರಿನ ಹೋಟೆಲ್ ಮಾಲಕರೊಬ್ಬರು ಸಭೆಯೊಂದರಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಆಗ್ರಹಿಸಿದ್ದರು, ಇದರ ಬೆನಲ್ಲಿ ಅವರು ನಿರ್ಮಲಾ ಸೀತಾರಾಮನ್ ಬಳಿ ಕ್ಷಮೆ ಯಾಚಿಸುವ ವಿಡಿಯೋ ಕೂಡ ವೈರಲ್ ಆಗಿತ್ತು.

ಈ ಬಗ್ಗೆ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಕೊಯಮತ್ತೂರಿನ ಅನ್ನಪೂರ್ಣ ರೆಸ್ಟೋರೆಂಟ್ ನಂತಹ ಸಣ್ಣ ವ್ಯಾಪಾರ ನಡೆಸುವ ಉದ್ಯಮಿಗಳು ಜಿಎಸ್ಟಿ ಸರಳೀಕರಣಕ್ಕೆ ಆಗ್ರಹಿಸಿದಾಗ ಅವರ ವಿನಂತಿಯನ್ನು ದುರಹಂಕಾರ ಮತ್ತು ಸಂಪೂರ್ಣ ಅಗೌರವದಿಂದ ನೋಡಲಾಗುತ್ತದೆ. ಆದರೆ, ಬಿಲಿಯನೇರ್ ಸ್ನೇಹಿತ ನಿಯಮಗಳನ್ನು ಉಲ್ಲಂಘಿಸಲು, ಕಾನೂನುಗಳನ್ನು ಬದಲಾಯಿಸಲು, ದೇಶದ ಸಂಪತ್ತನ್ನು ಪಡೆಯಲು ಪ್ರಯತ್ನಿಸಿದಾಗ, ಮೋದಿ ಜಿ ರೆಡ್ ಕಾರ್ಪೆಟ್ ಅನ್ನು ಹಾಸುತ್ತಾರೆ ಎಂದು ಹೇಳಿದ್ದಾರೆ.

ನಮ್ಮ ಸಣ್ಣ ವ್ಯಾಪಾರಗಳ ಮಾಲಿಕರು ಈಗಾಗಲೇ ನೋಟು ಅಮಾನ್ಯೀಕರಣ, ಕೈಗೆಟಕದ ಬ್ಯಾಂಕಿಂಗ್ ವ್ಯವಸ್ಥೆ, ತೆರಿಗೆ ಸುಲಿಗೆ ಮತ್ತು ವಿನಾಶಕಾರಿ ಜಿಎಸ್ಟಿಯ ಹೊಡೆತಗಳನ್ನು ಸಹಿಸಿಕೊಂಡಿದ್ದಾರೆ. ಕೊನೆಯದಾಗಿ ಇದೀಗ ಅವರಿಗೆ ಮತ್ತಷ್ಟು ಅವಮಾನ ಮಾಡಲಾಗಿದೆ. ಎಂಎಸ್ಎಂಇಗಳು ಹಲವು ವರ್ಷಗಳಿಂದ ಪರಿಹಾರವನ್ನು ಕೇಳುತ್ತಿವೆ. ಈ ದುರಹಂಕಾರಿ ಸರ್ಕಾರವು ಜನರ ಮಾತುಗಳನ್ನು ಆಲಿಸಿದರೆ, ಒಂದೇ ತೆರಿಗೆ ದರದೊಂದಿಗೆ ಸರಳೀಕೃತ ಜಿಎಸ್ಟಿಯನ್ನು ಜಾರಿಗೆ ತಂದರೆ ಲಕ್ಷಾಂತರ ವ್ಯಾಪಾರಿಗಳ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಜಿಎಸ್ಟಿಯ ಬದಲಾದ ದರಗಳ ಬಗ್ಗೆ ಹೋಟೆಲ್ ಮಾಲಿಕರು ಹೇಳಿದ್ದಾರೆ. ಹಣಕಾಸು ಸಚಿವರು ಕ್ಷಮೆಯಾಚಿಸುವಂತೆ ಮಾಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದ್ದಾರೆ.

ಸಭೆಯೊಂದರಲ್ಲಿ ತಮ್ಮ ಸಮಸ್ಯೆಗಳನ್ನು ಹಣಕಾಸು ಸಚಿವೆ ನಿರ್ಮಾಲಾ ಸೀತರಾಮನ್ ಬಳಿ ತೋಡಿಕೊಂಡಿದ್ದ ಶ್ರೀನಿವಾಸನ್, ಉತ್ತರ ಭಾರತದಲ್ಲಿ ಜನರು ಹೆಚ್ಚು ಸಿಹಿ ತಿನ್ನುತ್ತಾರೆ ಎಂಬ ಕಾರಣಕ್ಕೆ ಸಿಹಿತಿಂಡಿಗಳ ಮೇಲೆ 5% ಜಿಎಸ್ಟಿ ಇದೆ. ಖಾರದ ಮೇಲೆ 12% ಮತ್ತು ಕ್ರೀಮ್ ತುಂಬಿದ ಬನ್ ಗಳ ಮೇಲೆ 18% ಜಿಎಸ್ ಟಿ ಇದೆ, ಬನ್ ಮೇಲೆ ಯಾವುದೇ ಜಿಎಸ್ಟಿ ಇಲ್ಲ. ಹಾಗಾಗಿ, ಬನ್ ಮತ್ತು ಕ್ರೀಮ್ ಅನ್ನು ಪ್ರತ್ಯೇಕವಾಗಿ ಕೊಡಿ ಎಂದು ಗ್ರಾಹಕರು ಕೇಳುತ್ತಾರೆ. ಹಣ ಉಳಿಸಲು ಅವರೇ ಬನ್ ಮೇಲೆ ಕ್ರೀಂ ಹಾಕಿಕೊಳ್ಳುತ್ತಾರೆ. ತಮಿಳುನಾಡಿನಲ್ಲಿ ಸಿಹಿ, ನಮ್ಕೀನ್ ಮತ್ತು ಕಾಫಿ ಒಟ್ಟಿಗೆ ಹೋಗುತ್ತದೆ. ಆದ್ದರಿಂದ, ದಯವಿಟ್ಟು ಇವುಗಳಿಗೆ ಏಕರೂಪದ ಜಿಎಸ್ಟಿಯನ್ನು ವಿಧಿಸಿ, ಈ ಜಿಎಸ್ಟಿ ಗೊಂದಲದಿಂದಾಗಿ ಕಂಪ್ಯೂಟರೇ ಸ್ಟ್ರಕ್ ಆಗುತ್ತಿವೆ ಎಂದು ಹೇಳಿದ್ದರು.

ಶ್ರೀನಿವಾಸನ್ ಅವರ ಮಾತಿಗೆ ವೇದಿಕೆಯಲ್ಲಿ ಸೀತಾರಾಮನ್ ಮುಗುಳ್ನಕ್ಕಿದ್ದರು. ಆ ಬಳಿಕ ಶ್ರೀನಿವಾಸನ್ ಅವರು “ನಾನು ಯಾವುದೇ ಪಕ್ಷದ ಪರ ಇರುವವನಲ್ಲ” ಎಂದು ಸೀತಾರಾಮನ್ ಮುಂದೆ ಕ್ಷಮೆ ಯಾಚಿಸಿರುವುದು ವಿಡಿಯೋದಲ್ಲಿ ಕಂಡು ಬಂದಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News