ಕೋಟಾದಲ್ಲಿ ಮತ್ತೊಬ್ಬ ಜೆಇಇ ಆಕಾಂಕ್ಷಿ ಆತ್ಮಹತ್ಯೆ: ವರ್ಷದಲ್ಲಿ 20ನೇ ಪ್ರಕರಣ
ಕೋಟಾ: ಎಂಜಿನಿಯರಿಂಗ್ ಕೋರ್ಸ್‍ಗಳಿಗೆ ಪ್ರವೇಶ ಪಡೆಯಲು ಅಗತ್ಯವಾಗಿರುವ ಜಂಟಿ ಪ್ರವೇಶ ಪರೀಕ್ಷೆ (ಜೆಇಇ)ಗೆ ಸಜ್ಜಾಗುತ್ತಿದ್ದ 17 ವರ್ಷದ ವಿದ್ಯಾರ್ಥಿಯೊಬ್ಬ ರಾಜಸ್ಥಾನದ ಕೋಟಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ವರ್ಷದಲ್ಲಿ ಇದುವರೆಗೆ ಆತ್ಮಹತ್ಯೆ ಮಾಡಿಕೊಂಡ ಜೆಇಇ ಆಕಾಂಕ್ಷಿ ವಿದ್ಯಾರ್ಥಿಗಳ ಸಂಖ್ಯೆ 20ಕ್ಕೇರಿದೆ. ಜೆಇಇ ಹಾಗೂ ನೀಟ್ ಸ್ಪರ್ಧಾತ್ಮಕ ಪರೀಕ್ಷೆಗೆ ಸಜ್ಜಾಗುತ್ತಿದ್ದ ವಿದ್ಯಾರ್ಥಿಗಳ ಪೈಕಿ ಈ ತಿಂಗಳು ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆಗೆ ಸಜ್ಜಾಗುತ್ತಿದ್ದ ಮೂವರು ವಿದ್ಯಾರ್ಥಿಗಳು ಈ ವರ್ಷ ಇದುವರೆಗೆ ಪ್ರತಿ ತಿಂಗಳು ಆತ್ಮಹತ್ಯೆ ಮಾಡಿಕೊಂಡಿರುವುದು ಜಿಲ್ಲಾಡಳಿತದ ಅಂಕಿ ಅಂಶಗಳಿಂದ ಸ್ಪಷ್ಟವಾಗುತ್ತದ.
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಬಿಹಾರದಿಂದ ಆರು ತಿಂಗಳ ಹಿಂದೆ ಆಗಮಿಸಿದ್ದು, ಮಹಾವೀರ ನಗರದ ಹಾಸ್ಟೆಲ್‍ನಲ್ಲಿ ವಾಸ್ತವ್ಯ ಇದ್ದ ಎಂದು ಪೊಲೀಸರು ಹೇಳಿದ್ದಾರೆ.
ಕಳೆದ ಮೂರು ದಿನಗಳಿಂದ ವಿದ್ಯಾರ್ಥಿಯ ತಂದೆ ಕೂಡಾ ಆತನ ಜತೆಗೇ ಇದ್ದರು. ತಂದೆ ತಮ್ಮ ಮನೆಗೆ ಹೋದ ಬಳಿಕ ಮಗ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಜವಾಹರ್‍ನಗರ ಠಾಣಾಧಿಕಾರಿ ಶಿವರಾಜ್ ಸಿಂಗ್ ಹೇಳಿದ್ದಾರೆ. ತಮ್ಮ ಕರೆಗಳಿಗೆ ಮಗ ಉತ್ತರಿಸುತ್ತಿಲ್ಲ ಎಂದು ಹಾಸ್ಟೆಲ್ ವ್ಯವಸ್ಥಾಪಕರ ಬಳಿ ತಂದೆ ದೂರು ನೀಡಿದ ಹಿನ್ನೆಲೆಯಲ್ಲಿ ಕೊಠಡಿಗೆ ತೆರಳಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ.
ಕೋಟಾ ದೇಶದ ಪರೀಕ್ಷಾ ಸಿದ್ಧತಾ ವಹಿವಾಟಿನ ಕೇಂದ್ರವಾಗಿ ಮಾರ್ಪಟ್ಟಿದ್ದು, ವಾರ್ಷಿಕ 5000 ಕೋಟಿ ರೂಪಾಯಿ ವಹಿವಾಟು ನಡೆಯುತ್ತಿದೆ ಎಂದು ಜಿಲ್ಲಾಡಳಿತ ಹೇಳಿದೆ. ಈ ತಿಂಗಳ 4ರಂದು ಬಿಹಾರದ ಎಂಜಿನಿಯರಿಂಗ್ ಆಕಾಂಕ್ಷಿ ವಿದ್ಯಾರ್ಥಿಯೊಬ್ಬ ಹಾಗೂ ಹಿಂದಿನ ದಿನ ಉತ್ತರ ಪ್ರದೇಶದ ನೀಟ್ ಆಖಾಂಕ್ಷಿಯೊಬ್ಬ ಮಹಾವೀರ ನಗರ ಹಾಗೂ ವಿಜ್ಞಾನ ನಗರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.