ಉರ್ದು ಬದಲು ಸಂಸ್ಕೃತ ಬೋಧನೆ: ರಾಜಸ್ಥಾನದ ಮತ್ತೊಂದು ಶಾಲೆಗೆ ಸೂಚನೆ

ಸಾಂದರ್ಭಿಕ ಚಿತ್ರ
ಜೈಪುರ: ಏಪ್ರಿಲ್ ನಿಂದ ಆರಂಭವಾಗುವ ಮುಂದಿನ ಶೈಕ್ಷಣಿಕ ವರ್ಷದಿಂದ ಉರ್ದು ಭಾಷೆಯ ಬದಲಾಗಿ ಸಂಸ್ಕೃತ ಬೋಧಿಸಲು ಆರಂಭಿಸುವಂತೆ ರಾಜಸ್ಥಾನ ಶಿಕ್ಷಣ ಇಲಾಖೆ ಬಿಕನೇರ್ ನ ಸರ್ಕಾರಿ ಸೀನಿಯರ್ ಸೆಕೆಂಡರಿ ಶಾಲೆಗೆ ಸೂಚನೆ ನೀಡಿದೆ. ಇಂಥ ಸೂಚನೆ ಪಡೆದ ಎರಡನೇ ಶಾಲೆ ಇದಾಗಿದೆ. ಜೈಪುರದ ಆರ್ ಎಸಿ ಬೆಟಾಲಿಯನ್ ಪ್ರದೇಶದಲ್ಲಿರುವ ಮಹಾತ್ಮಗಾಂಧಿ ಸರ್ಕಾರಿ ಶಾಲೆಗೆ ಈ ಸೂಚನೆ ಬಂದ ಕೆಲವೇ ದಿನಗಳಲ್ಲಿ ಮಾಧ್ಯಮಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಆಶೀಶ್ ಮೋದಿ ಈ ಸೂಚನೆ ನೀಡಿದ್ದಾರೆ.
ಈ ಅವಳಿ ಸೂಚನೆಗಳ ವಿರುದ್ಧ ಆಕ್ರೋಶ ಬೂದಿ ಮುಚ್ಚಿದ ಕೆಂಡದಂತಿದ್ದು, ರಾಜ್ಯದಲ್ಲಿ ಹಲವು ಮಂದಿ ಉರ್ದು ಶಿಕ್ಷಕರು ನಕಲಿ ಪದವಿಗಳೊಂದಿಗೆ ಉದ್ಯೋಗ ಪಡೆದಿದ್ದಾರೆ ಎಂದು ಶಿಕ್ಷಣ ಸಚಿವ ಜವಾಹರ್ ಸಿಂಗ್ ಬೆಧಂ ಹೇಳಿಕೆ ನೀಡಿರುವುದು ಹೊಸ ವಿವಾದ ಹುಟ್ಟುಹಾಕಿದೆ.
"ಈ ಹಿಂದಿನ ಕಾಂಗ್ರೆಸ್ ಸರ್ಕಾರ ಸಂಸ್ಕೃತ ಶಿಕ್ಷಕರನ್ನು ಕಿತ್ತುಹಾಕಿ, ಅವರ ಹುದ್ದೆಗಳಿಗೆ ಉರ್ದು ಶಿಕ್ಷಕರನ್ನು ನಿಯೋಜಿಸಿತ್ತು. ನಮಗೆ ಉರ್ದು ತಿಳಿಯುವುದಿಲ್ಲ. ಆ ಭಾಷೆಯನ್ನು ಯಾರೂ ಕಲಿಯುವುದೂ ಇಲ್ಲ. ಆದ್ದರಿಂದ ಉರ್ದು ಶಿಕ್ಷಕರ ಹುದ್ದೆಗಳನ್ನು ಸ್ಥಗಿತಗೊಳಿಸಿ ಜನ ಬಯಸುವ ಭಾಷೆಯಲ್ಲಿ ಶಿಕ್ಷಣ ನೀಡುತ್ತೇವೆ" ಎಂದು ಬೆಧಂ ನೀಡಿರುವ ಹೇಳಿಕೆಯ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಚಿವರ ಹೇಳಿಕೆ ಆಧಾರ ರಹಿತ ಮತ್ತು ಬೇಜವಾಬ್ದಾರಿಯುತ ಎಂದು ಉರ್ದು ಶಿಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಯಾವುದೇ ತನಿಖೆ ನಡೆಸದೇ ಉರ್ದು ಶಿಕ್ಷಕರ ಪದವಿಗಳು ನಕಲಿ ಎಂದು ಹೇಳಿರುವುದು ಸರಿಯಲ್ಲ. ಸಂಸ್ಕೃತ ಶಿಕ್ಷಕರ ಹುದ್ದೆಗೆ ಬದಲಾಗಿ ಉರ್ದು ಶಿಕ್ಷಕರನ್ನು ನೇಮಕ ಮಾಡಲಾಗಿದೆ ಎಂದು ಹಿಂದಿನ ಸರ್ಕಾರದ ಮೇಲೆ ಮಾಡಿರುವ ಆರೋಪ ಕೂಡಾ ಸುಳ್ಳು. ಭಾಷಾ ಅಲ್ಪಸಂಖ್ಯಾತರ ವಿರುದ್ಧ ಬಹುಸಂಖ್ಯಾತರನ್ನು ಎತ್ತಿಕಟ್ಟುವ ಕೆಲಸವನ್ನು ಸಚಿವರು ಮಾಡುತ್ತಿದ್ದಾರೆ. ಇದು ದ್ವೇಷ ರಾಜಕಾರಣ" ಎಂದು ರಾಜಸ್ಥಾನ ಉರ್ದು ಶಿಕ್ಷಕರ ಸಂಘದ ಅಧ್ಯಕ್ಷ ಅಮೀನ್ ಕವಂಭಿನಿ ದೂರಿದ್ದಾರೆ.