ಪ್ರಧಾನ ಮಂತ್ರಿ ಅನ್ವರ್ ಇಬ್ರಾಹಿಂ ವಿಶೇಷ ಆಹ್ವಾನದ ಮೇರೆಗೆ ಮಲೇಷ್ಯಾಕ್ಕೆ ಭೇಟಿ ನೀಡಿದ ಎ.ಪಿ ಉಸ್ತಾದ್
ಕೋಝಿಕ್ಕೋಡ್: ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಅವರು, ಐದು ದಿನಗಳ ಪ್ರವಾಸಕ್ಕಾಗಿ ಮಲೇಷ್ಯಾ ತಲುಪಿದ್ದಾರೆ. ಪ್ರಧಾನ ಮಂತ್ರಿ ಅನ್ವರ್ ಇಬ್ರಾಹಿಂ ಅವರ ವಿಶೇಷ ಆಹ್ವಾನದ ಮೇರೆಗೆ ಎ.ಪಿ ಅಬೂಬಕರ್ ಮುಸ್ಲಿಯಾರ್ ಮಲೇಷ್ಯಾ ತಲುಪಿದ್ದಾರೆ.
ಮಲೇಷ್ಯಾ ಪ್ರಧಾನಿ ಕಳುಹಿಸಿಕೊಟ್ಟ ವಿಶೇಷ ವಿಮಾನದ ಮೂಲಕ ಕೋಝಿಕ್ಕೋಡ್ ವಿಮಾನ ನಿಲ್ದಾಣದಿಂದ ತೆರಳಿ, ಮುಂಜಾನೆ 3 ಗಂಟೆಗೆ ಕೌಲಾಲಂಪುರ ವಿಮಾನ ನಿಲ್ದಾಣಕ್ಕೆ ತಲುಪಿದ ಕಾಂತಪುರಂ ಅವರನ್ನು ಸರ್ಕಾರಿ ಪ್ರತಿನಿಧಿಗಳು ಮತ್ತು ಮರ್ಕಝ್ ಗ್ಲೋಬಲ್ ಮಲೇಷಿಯಾ ಚಾಪ್ಟರ್ ಪ್ರತಿನಿಧಿಗಳು ಬರಮಾಡಿಕೊಂಡರು.
ಕಳೆದ ಕೆಲವು ತಿಂಗಳಿನಿಂದ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಕಾಂತಪುರಂ ಅವರು, ಸುದೀರ್ಘ 9 ತಿಂಗಳ ಬಳಿಕ, ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಮಲೇಷ್ಯಾದಲ್ಲಿ ನಡೆಯಲಿರುವ ವಿವಿಧ ಸರ್ಕಾರಿ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಲಿದ್ದಾರೆ. ಮಲೇಷ್ಯಾ ಪ್ರಧಾನಿಯವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಲಿದ್ದಾರೆ.
ಜುಲೈ 22 ಶನಿವಾರ ಕಾಂತಪುರಂ, ಸಹೀಹುಲ್ ಬುಖಾರಿ ವಿದ್ವಾಂಸರ ಸಮ್ಮೇಳನದಲ್ಲಿ ಮುಖ್ಯ ಭಾಷಣ ಮಾಡಲಿದ್ದಾರೆ. ಆ ಕಾರ್ಯಕ್ರಮವನ್ನು ಅಲ್ಲಿನ ಪ್ರಧಾನಿ ಅನ್ವರ್ ಇಬ್ರಾಹಿಂ ಉದ್ಘಾಟಿಸುವರು. ಧಾರ್ಮಿಕ ವ್ಯವಹಾರಗಳ ಸಚಿವ ಡಾ. ಮುಹಮ್ಮದ್ ನಹೀಮ್ ಬಿನ್ ಮುಖ್ತಾರ್, ಶೇಖ್ ಡಾ. ಉಸಾಮಾ ಅಲ್ ಅಝ್ಹರಿ, ಮುಫ್ತಿ ಡಾ. ಲುಕ್ಮಾನ್ ಬಿನ್ ಹಾಜಿ ಅಬ್ದುಲ್ಲಾ ಭಾಗವಹಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.