ಪನ್ನುನ್ ಹತ್ಯೆಗೆ ಸಂಚು ಆರೋಪ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ನಿಖಿಲ್ ಗುಪ್ತಾ ಕುಟುಂಬ

Update: 2023-12-15 09:14 GMT

ಗುರುಪತ್ವಂತ್‌ ಸಿಂಗ್‌ ಪನ್ನುನ್‌ (Photo: NDTV)

ಹೊಸದಿಲ್ಲಿ: ಅಮೆರಿಕಾ ಮೂಲದ ಸಿಖ್‌ ಪ್ರತ್ಯೇಕತಾವಾದಿ ಗುರುಪತ್ವಂತ್‌ ಸಿಂಗ್‌ ಪನ್ನುನ್‌ನನ್ನು ಹತ್ಯೆಗೈಯ್ಯಲು ಭಾರತ ಸರ್ಕಾರದ ಅಧಿಕಾರಿಯೊಬ್ಬರೊಂದಿಗೆ ಸಂಚು ಹೂಡಿದ ಆರೋಪ ಎದುರಿಸುತ್ತಿರುವ ನಿಖಿಲ್‌ ಗುಪ್ತಾ ತನ್ನ ಕುಟುಂಬದ ಮೂಲಕ ಸುಪ್ರೀಂ ಕೋರ್ಟ್‌ ಕದ ತಟ್ಟಿದ್ದು, ಅಮೆರಿಕಾ ಆರಂಭಿಸಿರುವ ಗಡೀಪಾರು ಪ್ರಕ್ರಿಯೆಯಲ್ಲಿ ಭಾರತ ಸರ್ಕಾರದ ಹಸ್ತಕ್ಷೇಪ ಕೋರಿದ್ದಾರೆ.

ನಿಖಿಲ್‌ ಗುಪ್ತಾ ಕಾನೂನು ಪರಿಪಾಲಿಸುವ ವ್ಯಕ್ತಿಯಾಗಿದ್ದು ಅವರನ್ನು ಪ್ರಾಗ್‌ನಲ್ಲಿ ಅಕ್ರಮವಾಗಿ ಬಂಧಿಸಲಾಗಿದೆ ಹಾಗೂ ಅವರ ಜೀವ ಅಪಾಯದಲ್ಲಿರಬಹುದೆಂದು ಸುಪ್ರೀಂ ಕೋರ್ಟ್‌ ಮುಂದೆ ಸಲ್ಲಿಸಲಾಗಿರುವ ಅರ್ಜಿಯಲ್ಲಿ ಹೇಳಲಾಗಿದೆ. ಅರ್ಜಿಯ ವಿಚಾರಣೆ ಇಂದು ನಡೆಯಲಿದೆ.

ಭಾರತೀಯ ಪೌರರಾಗಿರುವ ನಿಖಿಲ್‌ ಗುಪ್ತಾ ಪ್ರಸ್ತುತ ಝೆಕ್‌ ಗಣರಾಜ್ಯದಲ್ಲಿ ಬಂಧಿತರಾಗಿದ್ದಾರೆ. ಅವರನ್ನು ಬಂಧಿಸಿ ಗಡೀಪಾರುಗೊಳಿಸುವಂತೆ ಅಮೆರಿಕಾ ಸರ್ಕಾರ ಮಾಡಿರುವ ಮನವಿಯಂತೆ ಕ್ರಮಕೈಗೊಳ್ಳಲಾಗಿದೆ. ಗಡೀಪಾರು ಪ್ರಕ್ರಿಯೆಯನ್ನು ತಾರ್ಕಿಕವಾಗಿ ಅನುಮೋದಿಸಲಾಗಿದೆ ಎಂದು ತಿಳಿದು ಬಂದಿದೆ.

ಪನ್ನುನ್‌ನನ್ನು ಹತ್ಯೆಗೈಯ್ಯಲು ಹಂತಕನನ್ನು ಬಾಡಿಗೆಗೆ ಪಡೆಯಲು ಯತ್ನಿಸುತ್ತಿರುವ ಆರೋಪವನ್ನು 52 ವರ್ಷದ ನಿಖಿಲ್‌ ಗುಪ್ತಾ ಎದುರಿಸುತ್ತಿದ್ದಾರೆ. ಖಾಲಿಸ್ತಾನಿ ಉಗ್ರನಾಗಿರುವ ಪನ್ನುನ್‌ ಭಾರತೀಯ-ಅಮೆರಿಕನ್‌ ಪೌರತ್ವ ಹೊಂದಿದ್ದಾನೆ. ಅವರು ಬಾಡಿಗೆಗೆ ಗೊತ್ತುಪಡಿಸಲು ಯತ್ನಿಸಿದ್ದ ಹಂತಕ ಮಾರುವೇಷದಲ್ಲಿರುವ ಅಮೆರಿಕಾದ ಫೆಡರಲ್‌ ಏಜಂಟ್‌ ಆಗಿದ್ದರು.

ಈ ಪ್ರಕರಣದಲ್ಲಿ ಗುಪ್ತಾ ತಪ್ಪಿತಸ್ಥನೆಂದು ಸಾಬೀತಾದಲ್ಲಿ 20 ವರ್ಷ ತನಕ ಜೈಲು ಶಿಕ್ಷೆ ವಿಧಿಸಬಹುದಾಗಿದೆ.

ಗುಪ್ತಾ ಮತ್ತು ಭಾರತ ಸರ್ಕಾರದ ಉದ್ಯೋಗಿ (ಅಮೆರಿಕಾದಲ್ಲಿ ಇವರಿಗೆ ಸಿಸಿ-1 ಕೋಡ್‌ ಮೂಲಕ ಗುರುತಿಸಲಾಗಿದೆ) ದೂರವಾಣಿ ಮೂಲಕ ಹಾಗೂ ಇತರ ಸಂವಹನಗಳ ಮೂಲಕ ಮಾತುಕತೆ ನಡೆಸಿದ್ದಾರೆ. ಈ ಕಾರ್ಯದಲ್ಲಿ ಸಹಕರಿಸಿದರೆ ಭಾರತದಲ್ಲಿ ಗುಪ್ತಾ ವಿರುದ್ಧ ಇರುವ ಕ್ರಿಮಿನಲ್‌ ಪ್ರಕರಣ ಕೈಬಿಡಲು ಸಹಾಯ ಮಾಡುವ ಭರವಸೆ ನೀಡಲಾಗಿತ್ತೆನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News