“ಶಿಲ್ಪಕಲೆಯ ವೈಭವದ ದ್ಯೋತಕ”: ಸುನೇಹ್ರಿ ಬಾಗ್‌ ಮಸೀದಿ ಕೆಡಹುವುದಕ್ಕೆ ಆರ್ಕಿಟೆಕ್ಟ್‌ಗಳ ವಿರೋಧ

Update: 2023-12-27 11:50 GMT

Photo : timesofindia

ಹೊಸದಿಲ್ಲಿ: ಸಂಚಾರ ನಿರ್ವಹಣೆಯನ್ನು ಉತ್ತಮಗೊಳಿಸುವ ಉದ್ದೇಶದೊಂದಿಗೆ ರಾಜಧಾನಿಯ ಸುನೇಹ್ರಿ ಬಾಗ್‌ ಪ್ರದೇಶದಲ್ಲಿರುವ ಮಸೀದಿಯನ್ನು ಕೆಡಹುವ ತನ್ನ ಉದ್ದೇಶದ ಕುರಿತಂತೆ ರವಿವಾರ ಹೊಸದಿಲ್ಲಿ ಮುನಿಸಿಪಲ್‌ ಕೌನ್ಸಿಲಿನ ಆರ್ಕಿಟೆಕ್ಚರ್‌ ಮತ್ತು ಪರಿಸರ ಇಲಾಖೆ ಸಾರ್ವಜನಿಕರ ಪ್ರತಿಕ್ರಿಯೆಯನ್ನು ಆಹ್ವಾನಿಸಿದ ಬೆನ್ನಿಗೇ ಈ ಪ್ರಸ್ತಾವನೆಗೆ ಹಲವರಿಂದ ವಿರೋಧ ವ್ಯಕ್ತವಾಗಿದ್ದು ದೇಶದ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸುವ ಉದ್ದೇಶದಿಂದ ಅದನ್ನು ಸಂರಕ್ಷಿಸಬೇಕೆಂದು ಹಲವು ಆರ್ಕಿಕೆಕ್ಟ್‌ಗಳು ಆಗ್ರಹಿಸಿದ್ದಾರೆ.

ಈ ಕುರಿತು ಅವರು ಎನ್‌ಡಿಎಂಸಿಯ ಮುಖ್ಯ ಆರ್ಕಿಟೆಕ್ಟ್‌ ಅವರಿಗೆ ಪತ್ರವನ್ನೂ ಬರೆದಿದ್ದಾರೆ.

“ಈ ಸುನೇಹ್ರಿ ಬಾಗ್‌ ಮಸೀದಿ ಕೇವಲ ಕಲ್ಲುಗಳಿಂದ ನಿರ್ಮಿಸಿದ ರಚನೆಯಲ್ಲ, ಅದು ನಮ್ಮ ಐತಿಹಾಸಿಕ ಪರಂಪರೆ ಮತ್ತು ಶಿಲ್ಪಕಲೆಯ ವೈಭವದ ದ್ಯೋತಕವಾಗಿದೆ. ಅದನ್ನು ಕೆಡಹುವುದು ದೇಶದ ಸಾಂಸ್ಕೃತಿಕ ಕ್ಷೇತ್ರಕ್ಕೆ ಮತ್ತು ನಮ್ಮ ನಗರದ ಅಸ್ಮಿತೆಗೆ ತುಂಬಿಸಲಾಗದ ನಷ್ಟವುಂಟು ಮಾಡಲಿದೆ,” ಎಂದು ಪತ್ರದಲ್ಲಿ ವಿವರಿಸಲಾಗಿದೆ.

“ಸಂಚಾರ ನಿರ್ವಹಣೆಯನ್ನು ಉತ್ತಮಗೊಳಿಸುವ ಅಗತ್ಯವನ್ನು ಅಲ್ಲಗಳೆಯಲಾಗದೇ ಇದ್ದರೂ ಅದು ನಮ್ಮ ಪರಂಪರೆಯ ವೆಚ್ಚದಲ್ಲಿ ಆಗಬಾರದು. ಅಭಿವೃದ್ಧಿ ಮತ್ತು ಸಂರಕ್ಷಣೆ ಜೊತೆಜೊತೆಯಾಗಿ ಸಾಗಬೇಕು ಎಂದು ಪತ್ರ ಹೇಳಿದೆ.

ಇಂತಹ ನಿರ್ಮಾಣವನ್ನು ಇಂದು ಮತ್ತೆ ನಿರ್ಮಿಸಲು ಸಾಧ್ಯವಾಗದು. ಇಂತಹ ಅದ್ಭುತ ನಿರ್ಮಾಣಗಳನ್ನೇಕೆ ನೆಲಸಮಗೊಳಿಸಬೇಕು. ಭವಿಷ್ಯಕ್ಕಾಗಿ ಇತಿಹಾಸದ ಸ್ಮಾರಕಗಳನ್ನು ನೆಲಸಮಗೊಳಿಸಲಾಗದು ಎಂದು ಪ್ರಮುಖ ಆರ್ಕಿಟೆಕ್ಟ್‌ ಒಬ್ಬರು ಹೇಳಿದ್ದಾರಲ್ಲದೆ ಇಲ್ಲಿ ಉತ್ತಮ ಸಂಚಾರಕ್ಕಾಗಿ ಸುರಂಗ ಮಾರ್ಗ ಅಥವಾ ಫ್ಲೈಓವರ್‌ ನಿರ್ಮಿಸಬಹುದಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News