ನಿಷೇಧಿತ ಪಿಎಫ್‌ಐ ಸದಸ್ಯನ ಬಂಧನ
ಹೊಸದಿಲ್ಲಿ: ಕೇರಳದ ಪಾಲಕ್ಕಾಡ್‌ನಲ್ಲಿ ಕಳೆದ ವರ್ಷದ ಎಪ್ರಿಲ್ 16ರಂದು ನಡೆದಿದ್ದ ಆರೆಸ್ಸೆಸ್ ನಾಯಕ ಶ್ರೀನಿವಾಸನ್ ಹತ್ಯೆಗೆ ಸಂಬಂಧಿಸಿದಂತೆ ನಿಷೇಧಿತ ಸಂಘಟನೆ ಪಿಎಫ್‌ಐನ ಪ್ರಮುಖ ಸದಸ್ಯ ಶಿಹಾಬ್ ಅಲಿ ಅಮಿಯಾಸ್ ಬಾಬು ಎಂಬಾತನನ್ನು ಬಂಧಿಸಿರುವುದಾಗಿ ಎನ್‌ಐಎ ಶುಕ್ರವಾರ ತಿಳಿಸಿದೆ.
ಹತ್ಯೆಯ ಬಳಿಕ ತಲೆಮರೆಸಿಕೊಂಡಿದ್ದ ಅಲಿಯನ್ನು ಕೇರಳದ ಮಲಪ್ಪುರಂ ಜಿಲ್ಲೆಯ ಆತನ ಮನೆಯಿಂದ ಬಂಧಿಸಲಾಗಿದೆ ಎಂದು ಅದು ಹೇಳಿದೆ.
ಪಿಎಫ್‌ಐ ನಾಯಕರ ಆಣತಿಯಂತೆ ಪ್ರಕರಣದಲ್ಲಿಯ ಪ್ರಮುಖ ಸಾಕ್ಷ್ಯವನ್ನು ನಾಶಮಾಡಿದ್ದ ಮುಹಮ್ಮದ್ ಹಕೀಂ ಎಂಬಾತನಿಗೆ ಅಲಿ ಆಶ್ರಯ ನೀಡಿದ್ದ ಎಂದು ಎನ್‌ಐಎ ತಿಳಿಸಿದೆ.
ಈ ವರ್ಷದ ಮಾರ್ಚ್‌ನಲ್ಲಿ ಎನ್‌ಐಎ ಪ್ರಕರಣದಲ್ಲಿ ಒಟ್ಟು 59 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿಯನ್ನು ಸಲ್ಲಿಸಿತ್ತು. ಸುದೀರ್ಘ ಕಾಲ ತಲೆಮರೆಸಿಕೊಂಡಿದ್ದ ಸಾಹೀರ್ ಕೆ.ವಿ ಎಂಬಾತನನ್ನು ಈ ವರ್ಷದ ಮೇ 16ರಂದು ಬಂಧಿಸುವ ಮೂಲಕ ಎನ್‌ಐಎ ಮಹತ್ವದ ಸಾಧನೆಯನ್ನು ಮಾಡಿತ್ತು.
ಈವರೆಗೆ 69 ವ್ಯಕ್ತಿಗಳನ್ನು ಪ್ರಕರಣದಲ್ಲಿ ಭಾಗಿಯಾದವರು ಎಂದು ಗುರುತಿಸಲಾಗಿದೆ ಎಂದು ಎನ್‌ಐಎ ತಿಳಿಸಿದೆ.