ಬಂಧಿತ ಪ.ಬಂಗಾಳ ಸಚಿವ ಮಲ್ಲಿಕ್‌ಗೆ ಪಾರ್ಶ್ವವಾಯು?
ಕೋಲ್ಕತಾ : ತಾನು ಅನಾರೋಗ್ಯ ಪೀಡಿತನಾಗಿದ್ದು, ತನ್ನ ದೇಹದ ಭಾಗಗಳು ಪಾರ್ಶ್ವವಾಯುವಿಗೆ ತುತ್ತಾಗಿರುವ ಸಾಧ್ಯತೆಯಿದೆ ಎಂದು ಪಡಿತರ ವಿತರಣೆ ಹಗರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿರುವ ಪಶ್ಚಿಮಬಂಗಾಳದ ಸಚಿವ ಜೋತಿಪ್ರಿಯಾ ಮಲ್ಲಿಕ್ ತಿಳಿಸಿದ್ದಾರೆ.
ಕೋಲ್ಕತಾದಲ್ಲಿ ಗುರುವಾರ ವೈದ್ಯಕೀಯ ತಪಾಸಣೆಗಾಗಿ ಮಲ್ಲಿಕ್ ಅವರನ್ನು ಕಮಾಂಡ್ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದಾಗ, ಸುದ್ದಿಗಾರರ ಜೊತೆ ಮಾತನಾಡಿದ ಸಂದರ್ಭ ಅವರು ಈ ವಿಷಯ ತಿಳಿಸಿದ್ದಾರೆ.
‘‘ನಾನು ಅಸ್ವಸ್ಥನಾಗಿದ್ದೇನೆ. ನನ್ನ ಎಡಗೈ ಹಾಗೂ ಬಲಗಾಲು ಪಾರ್ಶ್ವವಾಯು ಪೀಡಿತವಾಗಿದೆ’’ ಎಂದವರು ಹೇಳಿದರು. ಆದರೂ ತಾನು ನ.13ರಂದು ಮುಖ್ಯಮೆಟ್ರೋಪಾಲಿಟನ್ ನ್ಯಾಯಾಲಯದಲ್ಲಿ ನಡೆಯಲಿರುವ ಮುಂದಿನ ವಿಚಾರಣೆಗೆ ಖುದ್ದು ಹಾಜರಾಗುವುದಾಗಿ ಮಲ್ಲಿಕ್ ತಿಳಿಸಿದರು.
ಸಚಿವ ಮಲ್ಲಿಕ್ ಅವರನ್ನು ಅ. 27ರಂದು ನಸುಕಿನಲ್ಲಿ ಕೋಲ್ಕತಾದ ಸಾಲ್ಟ್‌ಲೇಕ್‌ನಲ್ಲಿರುವ ಅವರ ನಿವಾಸದಿಂದ ಈಡಿ. ಅಧಿಕಾರಿಗಳು ಬಂಧಿಸಿದ್ದರು. ಆನಂತರ ಅವರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿದ ಸಂದರ್ಭ ಅಸ್ವಸ್ಥಗೊಂಡಿದ್ದರು. ಪ್ರಾಥಮಿಕ ಚಿಕಿತ್ಸೆಯ ಬಳಿಕ ಸಿಎಂಎಂ ನ್ಯಾಯಾಲಯವು ಅವರಿಗೆ ಕಮಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಬೇಕೆಂದು ಆದೇಶಿಸಿತು.