ಮಸೀದಿಗೆ ಬಾಣ ಬಿಟ್ಟಂತೆ ಸಂಜ್ಞೆ: ವಿಡಿಯೋ ವೈರಲ್‌ ಆದ ಬಳಿಕ ಕ್ಷಮೆಯಾಚಿಸಿದ ಹೈದರಾಬಾದ್‌ ಬಿಜೆಪಿ ಅಭ್ಯರ್ಥಿ

Update: 2024-04-19 09:30 GMT

PC : NDTV

ಹೊಸದಿಲ್ಲಿ: ಹೈದರಾಬಾದ್‌ ಲೋಕಸಭಾ ಕ್ಷೇತ್ರದಲ್ಲಿ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್‌ ಉವೈಸಿ ವಿರುದ್ಧ ಸ್ಪರ್ಧಿಸುತ್ತಿರುವ ಬಿಜೆಪಿಯ ಮಾಧವಿ ಲತಾ ಬಾಣವನ್ನು ಮಸೀದಿಯತ್ತ ಗುರಿಯಾಗಿಸಿದಂತೆ ಸನ್ನೆಯ ಮೂಲಕ ಸೂಚಿಸುತ್ತಿರುವ ವಿವಾದಾತ್ಮಕ ವೀಡಿಯೋ ಕುರಿತಂತೆ ಸ್ಪಷ್ಟೀಕರಣ ನೀಡಿದ್ದಾರೆ. ಈ ವೀಡಿಯೋ “ಅಪೂರ್ಣವಾಗಿದೆ” ಎಂದು ಹೇಳಿರುವ ಅವರು ಅದೇ ಸಮಯ ತಮ್ಮ ಈ ಕೃತ್ಯಕ್ಕಾಗಿ ಕ್ಷಮೆಯನ್ನೂ ಯಾಚಿಸಿದ್ದಾರೆ.

“ಋಣಾತ್ಮಕತೆಯನ್ನು ಹರಡಲು ನನ್ನ ಒಂದು ವೀಡಿಯೋ ಬಳಸಲಾಗುತ್ತಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಅದು ಅಪೂರ್ಣ ವೀಡಿಯೋ ಎಂದು ಸ್ಪಷ್ಟೀಕರಣ ನೀಡಲು ಬಯಸುತ್ತೇನೆ. ಅದರಿಂದ ಭಾವನೆಗಳಿಗೆ ನೋವುಂಟಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ, ಏಕೆಂದರೆ ನಾನು ಎಲ್ಲರನ್ನೂ ಗೌರವಿಸುತ್ತೇನೆ,” ಎಂದು ಆಕೆ ಪೋಸ್ಟ್‌ ಮಾಡಿದ್ದಾರೆ.

ನಗರದ ಹಳೆಯ ಭಾಗದ ಸಿದ್ದಿಯಂಬೆರ್‌ ಬಜಾರ್‌ ಜಂಕ್ಷನ್‌ನಲ್ಲಿ ರಾಮ ನವಮಿ ಮೆರವಣಿಗೆಯಲ್ಲಿ ಭಾಗವಹಿಸುವ ವೇಳೆ ತೆರೆದ ವಾಹನದಲ್ಲಿ ಸಾಗುತ್ತಿದ್ದಾಗ ಈ ಘಟನೆ ನಡೆದಿತ್ತು. ಈ ಮೆರವಣಿಗೆಯನ್ನು ಬಿಜೆಪಿ ಶಾಸಕ ರಾಜಾ ಸಿಂಗ್‌ ಆಯೋಜಿಸಿದ್ದರು.

ಆಕೆ ಮಸೀದಿ ಹತ್ತಿರದಲ್ಲಿರುವಾಗಲೇ ಈ ಸನ್ನೆ ಮಾಡಿಲ್ಲ, ಮೆರವಣಿಗೆಯಲ್ಲಿ ಬಹಳ ಹೊತ್ತಿನಿಂದ ಮಾಡುತ್ತಿದ್ದರು ಎಂದು ಆಕೆಯ ಜೊತೆಗಿದ್ದ ಓರ್ವ ವ್ಯಕ್ತಿ ಹೇಳಿದ್ದಾರೆ.

ಮೇಲಾಗಿ ವೀಡಿಯೋದಲ್ಲಿ ಕಾಣಿಸುವ ಮಸೀದಿಗೆ ಬಿಳಿ ಬಟ್ಟೆಯಿಂದ ಮುಚ್ಚಲಾಗಿತ್ತು, ಮತೀಯ ಉದ್ವಿಗ್ನತೆಯನ್ನು ತಪ್ಪಿಸಲು ಹೀಗೆ ಮಾಡಲಾಗಿತ್ತು ಎನ್ನಲಾಗಿದೆ.

ಎಐಎಂಐಎಂ ಪದಾಧಿಕಾರಿಯೊಬ್ಬರು ಪ್ರತಿಕ್ರಿಯಿಸಿ ಮಾಧವಿ ಲತಾ ವಿರುದ್ಧ ಪೊಲೀಸ್‌ ದೂರು ನೀಡಲಾಗುವುದು ಹಾಗೂ ಆಕೆಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಚುನಾವಣಾ ಆಯೋಗಕ್ಕೂ ದೂರು ನೀಡಲಾಗುವುದು ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News