ಪತ್ನಿ, ವಕೀಲ ಕೊಲೆ ಪ್ರಕರಣದಲ್ಲಿ ಕಲಾವಿದ ಚಿಂತನ್ ಉಪಾಧ್ಯಾಯ ಅಪರಾಧಿ ; ಸೆಷನ್ಸ್ ನ್ಯಾಯಾಲಯ ತೀರ್ಪು

Update: 2023-10-05 16:10 GMT

ಹೇಮಾ ಉಪಾಧ್ಯಾಯ,ಚಿಂತನ್ ಉಪಾಧ್ಯಾಯ | Photo:indiatoday.in

ಮುಂಬೈ: ತನ್ನ ಪತ್ನಿ ಹೇಮಾ ಉಪಾಧ್ಯಾಯ ಮತ್ತು ಅವರ ವಕೀಲ ಹರೇಶ ಭಂಭಾನಿ ಅವರನ್ನು ಕೊಲ್ಲಲು ಕುಮ್ಮಕ್ಕು ನೀಡಿ ಸಂಚು ರೂಪಿಸಿದ್ದಕ್ಕಾಗಿ ಕಲಾವಿದ ಚಿಂತನ್ ಉಪಾಧ್ಯಾಯ ಅವರನ್ನು ಅಪರಾಧಿ ಎಂದು ಉಪನಗರ ದಿಂಡೋಶಿಯ ಸೆಷನ್ಸ್ ನ್ಯಾಯಾಲಯವು ಗುರುವಾರ ಘೋಷಿಸಿದೆ. ನ್ಯಾಯಾಲಯವು ಶಿಕ್ಷೆಯ ಪ್ರಮಾಣದ ಕುರಿತು ವಾದಗಳನ್ನು ಶನಿವಾರ ಆಲಿಸಲಿದೆ.

ಹೇಮಾ ಉಪಾಧ್ಯಾಯ ಮತ್ತು ಭಂಭಾನಿ ಅವರನ್ನು 2015, ಡಿ.11ರಂದು ಹತ್ಯೆ ಮಾಡಲಾಗಿತ್ತು. ರಟ್ಟಿನ ಪೆಟ್ಟಿಗೆಗಳಲ್ಲಿ ತುಂಬಲಾಗಿದ್ದ ಅವರ ಶವಗಳು ಮುಂಬೈನ ಕಾಂದಿವಲಿ ಪ್ರದೇಶದ ಹಳ್ಳವೊಂದರಲ್ಲಿ ಪತ್ತೆಯಾಗಿದ್ದವು. ಇತರ ಆರೋಪಿಗಳಾದ ವಿಜಯ್ ರಾಜಭರ್, ಪ್ರದೀಪಕುಮಾರ್ ರಾಜಭರ್, ಶಿವಕುಮಾರ್ ರಾಜಭರ್ ಮತ್ತು ಆಜಾದ್ ರಾಜಭರ್ ಅವರ ಮೇಲಿನ ಕೊಲೆ ಆರೋಪವನ್ನು ನ್ಯಾಯಾಲಯವು ಎತ್ತಿ ಹಿಡಿದಿದೆ. ಇನ್ನೊಬ್ಬ ಆರೋಪಿ ವಿದ್ಯಾಧರ ರಾಜಭರ್ ತಲೆ ಮರೆಸಿಕೊಂಡಿದ್ದಾನೆ. ಉಪಾಧ್ಯಾಯ ತನ್ನ ಪತ್ನಿ ಮತ್ತು ಅವರ ವಕೀಲರ ಬಗ್ಗೆ ದ್ವೇಷ ಇದ್ದುದರಿಂದ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು.

ಘಟನೆಯ ಬೆನ್ನಲ್ಲೇ ತನ್ನ ಪತ್ನಿಯ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದಲ್ಲಿ ಉಪಾಧ್ಯಾಯರನ್ನು ಬಂಧಿಸಲಾಗಿತ್ತು. ಸೆಪ್ಟಂಬರ್ 2021ರಲ್ಲಿ ಸರ್ವೋಚ್ಚ ನ್ಯಾಯಾಲಯವು ಜಾಮೀನು ಮಂಜೂರು ಮಾಡುವ ಮುನ್ನ ಸುಮಾರು ಆರು ವರ್ಷಗಳನ್ನು ಅವರು ಜೈಲಿನಲ್ಲಿ ಕಳೆದಿದ್ದರು.

ಜೋಡಿ ಕೊಲೆ ಪ್ರಕರಣವನ್ನು ಭೇದಿಸಲು ಪೋಲಿಸರಿಗೆ ಸಾಧ್ಯವಾಗಿರಲಿಲ್ಲ, ಹೀಗಾಗಿ ತನ್ನ ಮತ್ತು ಹೇಮಾ ನಡುವಿನ ವೈವಾಹಿಕ ವಿವಾದದ ಲಾಭ ಪಡೆದು ತನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ಉಪಾಧ್ಯಾಯ ನ್ಯಾಯಾಲಯದಲ್ಲಿ ತನ್ನ ಅಂತಿಮ ಹೇಳಿಕೆಯಲ್ಲಿ ಪ್ರತಿಪಾದಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News