ಅರುಣಾಚಲ ಪ್ರದೇಶವು ಭಾರತದ ಭೂಭಾಗ: ಚೀನಾಕ್ಕೆ ಅಮೆರಿಕಾ ತಿರುಗೇಟು
ಹೊಸದಿಲ್ಲಿ: ಅರುಣಾಚಲ ಪ್ರದೇಶವು ಭಾರತದ ಭೂಭಾಗ ಎಂಬುದನ್ನು ಅಮೆರಿಕಾ ಮಾನ್ಯ ಮಾಡುತ್ತದೆ ಹಾಗೂ ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿ ಯಾವುದೇ ಒಳನುಸುಳುವಿಕೆ ಅಥವಾ ಒತ್ತುವರಿಯನ್ನು ಬಲವಾಗಿ ವಿರೋಧಿಸುವುದಾಗಿ ಅಮೆರಿಕಾ ಹೇಳಿದೆ.
ಅರುಣಾಚಲ ಪ್ರದೇಶವು ಚೀನಾದ ಭಾಗವಾಗಿದೆ ಎಂದು ಚೀನಾದ ಮಿಲಿಟರಿ ಇತ್ತೀಚೆಗೆ ಹೇಳಿಕೊಂಡಿರುವ ಹಿನ್ನೆಲೆಯಲ್ಲಿ ಅಮೆರಿಕಾದ ಹೇಳಿಕೆ ಮಹತ್ವ ಪಡೆದಿದೆ.
ಚೀನಾದ ರಕ್ಷಣಾ ಸಚಿವಾಲಯದ ವಕ್ತಾರ ಝಂಗ್ ಕ್ಸಿಯೋಗಂಗ್ ಇತ್ತೀಚೆಗೆ ಮಾತನಾಡಿ ಕ್ಸಿಝಂಗ್‌ನ ದಕ್ಷಿಣ ಭಾಗ (ಟಿಬೆಟ್‌ಗೆ ಚೀನಾದ ಹೆಸರು), ಚೀನಾ ಭೂಭಾಗದ ಅವಿಭಾಜ್ಯ ಅಂಗವಾಗಿದೆ ಹಾಗೂ ಭಾರತವು ಅಕ್ರಮವಾಗಿ ಸ್ಥಾಪಿಸಿದ ಅರುಣಾಚಲ ಪ್ರದೇಶ ಎಂಬ ಭಾಗವನ್ನು ಬೀಜಿಂಗ್ ಯಾವತ್ತೂ ಮಾನ್ಯ ಮಾಡುವುದಿಲ್ಲ ಮತ್ತು ವಿರೋಧಿಸುತ್ತದೆ ಎಂದು ಹೇಳಿದ್ದರು.
ಕಳೆದ ವಾರ ಪ್ರಧಾನಿ ಮೋದಿಯ ಅರುಣಾಚಲ ಪ್ರದೇಶ ಭೇಟಿಗೆ ರಾಜತಾಂತ್ರಿಕ ಮೂಲಗಳ ಮೂಲಕ ಚೀನಾ ವಿರೋಧ ವ್ಯಕ್ತಪಡಿಸಿದೆ ಹಾಗೂ ಭಾರತದ ಕ್ರಮವು ಇನ್ನೂ ಬಗೆಹರಿಯದ ಗಡಿ ಸಮಸ್ಯೆಯನ್ನು ಇನ್ನಷ್ಟು ಕ್ಲಿಷ್ಟಗೊಳಿಸಲಿದೆ ಎಂದು ಹೇಳಿದೆ.