ಅರವಿಂದ್ ಕೇಜ್ರಿವಾಲ್ ಅಸ್ವಸ್ಥಗೊಂಡಿದ್ದು, ಜೈಲಿನಲ್ಲಿ 4.5 ಕೆಜಿ ತೂಕ ಕಳೆದುಕೊಂಡಿದ್ದಾರೆ: ಆಪ್ ಆರೋಪ

Update: 2024-04-03 06:05 GMT

 ಅರವಿಂದ್ ಕೇಜ್ರಿವಾಲ್ | Photo: PTI 

ಹೊಸದಿಲ್ಲಿ: ಮಾರ್ಚ್ 21ರಂದು ಬಂಧನಕ್ಕೀಡಾದಾಗಿನಿಂದ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 4.5 ಕೆಜಿ ತೂಕ ಕಳೆದುಕೊಂಡಿದ್ದಾರೆ ಎಂದು ಇಂದು ಆಮ್ ಆದ್ಮಿ ಪಕ್ಷದ ನಾಯಕಿ ಹಾಗೂ ದಿಲ್ಲಿ ಸಚಿವೆ ಅತಿಶಿ ಆರೋಪಿಸಿದ್ದಾರೆ. ಆದರೆ, ಈ ಆರೋಪವನ್ನು ನಿರಾಕರಿಸಿರುವ ತಿಹಾರ್ ಜೈಲು ಪ್ರಾಧಿಕಾರಗಳು, ಅವರು ಆರೋಗ್ಯವಾಗಿದ್ದಾರೆ ಹಾಗೂ ಎರಡು ದಿನಗಳ ಹಿಂದೆ ಜೈಲಿಗೆ ಕಳಿಸಿದಾಗಿನಿಂದ ಯಾವುದೇ ತೂಕ ನಷ್ಟ ಅನುಭವಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇಂದು ಬೆಳಗ್ಗೆ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಅತಿಶಿ, “ಕೇಜ್ರಿವಾಲ್ ತೀವ್ರ ಸ್ವರೂಪದ ಮಧುಮೇಹಿಯಾಗಿದ್ದಾರೆ. ತಮ್ಮ ಆರೋಗ್ಯ ಸಮಸ್ಯೆಯ ಹೊರತಾಗಿಯೂ ಅವರು ಎಡೆಬಿಡದೆ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಬಂಧನದ ಬಳಿಕ ಅವರು 4.5 ಕೆಜಿ ತೂಕ ಕಳೆದುಕೊಂಡಿದ್ದಾರೆ. ಇದು ತುಂಬಾ ಆತಂಕಕಾರಿ ಸಂಗತಿ. ಬಿಜೆಪಿಯು ಅವರ ಆರೋಗ್ಯವನ್ನು ಅಪಾಯಕ್ಕೆ ಸಿಲುಕಿಸುತ್ತಿದೆ. ಅರವಿಂದ್ ಕೇಜ್ರಿವಾಲ್ ಅವರಿಗೇನಾದರೂ ಆದರೆ, ದೇಶ ಮಾತ್ರವಲ್ಲ, ದೇವರೂ ಕೂಡಾ ಅವರನ್ನು ಕ್ಷಮಿಸುವುದಿಲ್ಲ” ಎಂದು ಕಿಡಿ ಕಾರಿದ್ದಾರೆ.

ದಿಲ್ಲಿ ಅಬಕಾರಿ ನೀತಿ ಪ್ರಕರಣದ ಸಂಬಂಧ ಅಕ್ರಮ ಹಣ ವರ್ಗಾವಣೆ ಆರೋಪದಡಿ ಮಾರ್ಚ್ 21ರಂದು ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿದ್ದ ಅರವಿಂದ್ ಕೇಜ್ರಿವಾಲ್ ರನ್ನು ಸೋಮವಾರವಂದು ಎಪ್ರಿಲ್ 15ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅವರೀಗ ತಿಹಾರ್ ಜೈಲಿನಲ್ಲಿದ್ದಾರೆ.

ಭಾರಿ ಭದ್ರತೆ ಹೊಂದಿರುವ ತಿಹಾರ್ ಜೈಲಿನ ಮೂಲಗಳ ಪ್ರಕಾರ, ಅವರನ್ನು ಜೈಲಿಗೆ ಕರೆ ತಂದಾಗ, ಅವರ ತೂಕ 55 ಕೆಜಿ ಇತ್ತು ಹಾಗೂ ಅವರ ತೂಕದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕೇಜ್ರಿವಾಲ್ ರ ಸಕ್ಕರೆ ಪ್ರಮಾಣವು ಸಾಮಾನ್ಯವಾಗಿದ್ದು, ಅವರು ಪ್ರತಿ ದಿನ ಬೆಳಗ್ಗೆ ಯೋಗ ಮತ್ತು ಧ್ಯಾನದಲ್ಲಿ ತೊಡಗುತ್ತಾರೆ ಎಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News