ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಗೆ ಐದು ಪ್ರಶ್ನೆಗಳನ್ನು ಕೇಳಿದ ಅರವಿಂದ್ ಕೇಜ್ರಿವಾಲ್

Update: 2024-09-22 13:41 GMT

PC : PTI


ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ನೇತೃತ್ವದ ಸರಕಾರದ ಹಾಲಿ ರಾಜಕೀಯ ತಂತ್ರಗಳ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ ದಿಲ್ಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಎದುರು ಐದು ಪ್ರಶ್ನೆಗಳನ್ನಿಟ್ಟಿದ್ದಾರೆ.

ಬಿಜೆಪಿಯ ಮಾತೃಸಂಸ್ಥೆಯಾದ ಆರೆಸ್ಸೆಸ್ ನ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಪ್ರಧಾನಿ ಮೋದಿ ಹಾಗೂ ಬಿಜೆಪಿ ಆಡಳಿತದ ಕುರಿತು ಪ್ರಶ್ನೊಗಳನ್ನಿಡುವ ಮೂಲಕ ಅರವಿಂದ್ ಕೇಜ್ರಿವಾಲ್ ಹೊಸ ರಾಜಕೀಯ ರಣತಂತ್ರವನ್ನು ಪ್ರಯೋಗಿಸಲು ಮುಂದಾಗಿದ್ದಾರೆ ಎಂದು ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.

ಜಂತರ್ ಮಂತರ್ ನಲ್ಲಿ ಆಯೋಜಿಸಲಾಗಿದ್ದ ‘ಜನತಾ ಕಿ ಅದಾಲತ್’ ಅನ್ನು ಉದ್ದೇಶಿಸಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, “ಇದೀಗ ತನ್ನ ವರಸೆಗಳನ್ನು ಪ್ರದರ್ಶಿಸುತ್ತಿರುವ ಪುತ್ರನು ತನ್ನ ತಾಯಿಗಿಂತ ಎತ್ತರಕ್ಕೆ ಬೆಳೆದುಬಿಟ್ಟಿದ್ದಾನೆಯೆ?” ಎಂದು ಮೋಹನ್ ಭಾಗವತ್ ಅವರನ್ನು ಪ್ರಶ್ನಿಸಿದ್ದಾರೆ. ಇದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ಆಡಳಿತ ವೈಖರಿಯ ಕುರಿತು ಐದು ಪ್ರಶ್ನೆಗಳನ್ನೂ ಮೋಹನ್ ಭಾಗವತ್ ಗೆ ಕೇಳಿದ್ದಾರೆ.

ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಪಕ್ಷಗಳನ್ನು ಒಡೆಯುವುದು, ಸರಕಾರಗಳನ್ನು ಉರುಳಿಸುವುದು ಹಾಗೂ ತನ್ನ ತೆಕ್ಕೆಗೆ ಭ್ರಷ್ಟ ನಾಯಕರನ್ನು ಸೇರಿಸಿಕೊಳ್ಳುವ ಬಿಜೆಪಿಯ ರಾಜಕೀಯ ತಂತ್ರದ ಬಗ್ಗೆ ಆರೆಸ್ಸೆಸ್ ಗೆ ಸಮ್ಮತಿ ಇದೆಯೆ ಎಂದು ಅವರು ಪ್ರಶ್ನಿಸಿದ್ದಾರೆ.

ಬಿಜೆಪಿಯ ಸೈದ್ಧಾಂತಿಕ ಗುರುವಾದ ಆರೆಸ್ಸೆಸ್ ನ ಅಗತ್ಯ ಇನ್ನು ಮುಂದೆ ಪಕ್ಷಕ್ಕಿಲ್ಲ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದಾಗ ನಿಮಗೇನನ್ನಿಸಿತು ಎಂಬ ಮತ್ತೊಂದು ಪ್ರಶ್ನೆಯನ್ನು ಅವರು ಎಸೆದಿದ್ದಾರೆ.

ಬಿಜೆಪಿಯ ಹಾಲಿ ರಾಜಕೀಯ ನೀತಿಯ ಕುರಿತು ನಿಮಗೆ ಸಮಾಧಾನವಿದೆಯೆ ಎಂದು ಅವರು ಮೂರನೆಯ ಪ್ರಶ್ನೆ ಕೇಳಿದ್ದಾರೆ.

ಪಕ್ಷದ ಎಲ್ಲ ನಾಯಕರ ನಿವೃತ್ತಿ ವಯಸ್ಸು 75 ವರ್ಷ ಎಂಬ ನಿಯಮಯನ್ನು ಆರೆಸ್ಸೆಸ್ ಮತ್ತು ಬಿಜೆಪಿ ಮಾಡಿದೆ. ಈ ನಿಯಮದನ್ವಯ ಎಲ್.ಕೆ.ಅಡ್ವಾಣಿ, ಮುರುಳಿ ಮನೋಹರ್ ಜೋಷಿ, ಕಲ್ ರಾಜ್ ಮಿಶ್ರಾ ಮತ್ತಿತರರು ಸಕ್ರಿಯ ರಾಜಕಾರಣದಿಂದ ನಿವೃತ್ತಿ ಹೊಂದಿದ್ದಾರೆ. ಆದರೆ, ಈ ನಿಯಮ ಪ್ರಧಾನಿ ಮೋದಿಗೆ ಅನ್ವಯಿಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಅಡ್ವಾಣಿಗೆ ಅನ್ವಯವಾದ ನಿಯಮವು ಮೋದಿಯವರಿಗೆ ಅನ್ವಯವಾಗುವುದಿಲ್ಲವೆಂಬ ವಾಸ್ತವವನ್ನು ನೀವು ಒಪ್ಪಿಕೊಳ್ಳುತ್ತೀರಾ? ಎಂದು ನಾಲ್ಕನೆಯ ಪ್ರಶ್ನೆ ಮುಂದಿಟ್ಟಿದ್ದಾರೆ.

“ತನ್ನ ವರಸೆಗಳನ್ನು ಪ್ರದರ್ಶಿಸುತ್ತಿರುವ ಪುತ್ರನು ತಾಯಿಗಿಂತ ಎತ್ತರಕ್ಕೆ ಬೆಳೆದಿದ್ದಾನೆಯೆ?” ಎಂದು ಐದನೆಯ ಪ್ರಶ್ನೆ ಕೇಳಿದ್ದಾರೆ.

ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನೇ ನೇರವಾಗಿ ಪ್ರಶ್ನಿಸುವ ಮೂಲಕ ಅವರನ್ನು ಪೇಚಿಗೆ ಸಿಲುಕಿಸುವ ಹಾಗೂ ಪ್ರಧಾನಿ ಮೋದಿ ಕುರಿತು ಪ್ರತಿಕ್ರಿಯಿಸಲೇಬೇಕಾದ ಒತ್ತಡವನ್ನು ಸೃಷ್ಟಿಸುವ ರಾಜಕೀಯ ತಂತ್ರ ಅರವಿಂದ್ ಕೇಜ್ರಿವಾಲ್ ಅವರ ಪಂಚಪ್ರಶ್ನೆಗಳಲ್ಲಿ ಅಡಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News