ಅರವಿಂದ್ ಕೇಜ್ರಿವಾಲ್ ಗೆ ಮಧ್ಯಂತರ ಜಾಮೀನು ಸಾಧ್ಯತೆ ಪರಿಶೀಲನೆ: ಸುಪ್ರೀಂಕೋರ್ಟ್
ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡುವ ಮೂಲಕ ಅವರು ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ಕೈಗೊಳ್ಳಲು ಅನುವು ಮಾಡಿಕೊಡುವ ಸಾಧ್ಯತೆಯನ್ನು ಸುಪ್ರೀಂಕೋರ್ಟ್ ಪರಿಶೀಲಿಸಲಿದೆ.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ನ್ಯಾಯಪೀಠ ಮಂಗಳವಾರ (ಮೇ 7) ಮಧ್ಯಂತರ ಜಾಮೀನು ಅರ್ಜಿಯ ಪರಿಶೀಲನೆ ನಡೆಸಲಿದೆ. ಕಾನೂನು ಜಾರಿ ನಿರ್ದೇಶನಾಲಯ (ಈಡಿ) ಮತ್ತು ಅರವಿಂದ್ ಕೇಜ್ರಿವಾಲ್ ಅವರ ವಕೀಲರು ಸಿದ್ಧರಿರುವಂತೆ ಸೂಚಿಸಲಾಗಿದೆ.
ಆಮ್ ಆದ್ಮಿ ಪಾರ್ಟಿ ಮುಖಂಡರೂ ಆಗಿರುವ ಕೇಜ್ರಿವಾಲ್ ಅವರನ್ನು ಈಗ ರದ್ದಾಗಿರುವ ದಿಲ್ಲಿ ಮದ್ಯ ನೀತಿಗೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾದ ಹಗರಣದಲ್ಲಿ ಷಾಮೀಲಾದ ಆರೋಪದಲ್ಲಿ ಬಂಧಿಸಲಾಗಿತ್ತು. ಕೆಳಹಂತದ ನ್ಯಾಯಾಲಯಗಳಲ್ಲಿ ಜಾಮೀನು ಲಭ್ಯವಾಗದ ಹಿನ್ನೆಲೆಯಲ್ಲಿ ಅವರು ಸುಪ್ರೀಂಕೋರ್ಟ್ ಮೆಟ್ಟಲೇರಿದ್ದರು.
ಭ್ರಷ್ಟಾಚಾರ ಹಗರಣದಲ್ಲಿ ಬಂಧಿತರಾದ ಮೂರನೇ ಎಎಪಿ ಮುಖಂಡ ಇವರಾಗಿದ್ದು, ಇದಕ್ಕೂ ಮುನ್ನ ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಅವರನ್ನು ಬಂಧಿಸಲಾಗಿತ್ತು. ಸಂಜಯ್ ಸಿಂಗ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ಕೇಜ್ರಿವಾಲ್ ಪರ ಹಾಜರಾದ ಹಿರಿಯ ವಕೀಲ ಅಭಿಷೇಖ್ ಸಿಂಘ್ವಿ, ದೆಹಲಿ ಸಿಎಂ ವಿರುದ್ಧ ಯಾವ ಪುರಾವೆ ಕೂಡಾ ಇಲ್ಲ. ಅವರ ಬಂಧನ ಅಕ್ರಮ. ಜಾರಿ ನಿರ್ದೇಶನಾಲಯದ ಒಂಬತ್ತು ಸಮನ್ಸ್ ಗಳಿಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಹಾಜರಾಗಲು ವಿಫಲರಾಗಿದ್ದಾರೆ ಎನ್ನುವುದು ಬಂಧನಕ್ಕೆ ಆಧಾರವಾಗದು ಎಂದು ವಾದಿಸಿದರು.