ಜೈಲಿನಿಂದ 2ನೇ ಆದೇಶ ಹೊರಡಿಸಿದ ಕೇಜ್ರಿವಾಲ್

Update: 2024-03-26 09:22 GMT

ಅರವಿಂದ್ ಕೇಜ್ರಿವಾಲ್ | Photo: PTI 


ಹೊಸದಿಲ್ಲಿ: ಜೈಲಿನಿಂದ ಮೊದಲ ಆದೇಶ ಹೊರಡಿಸಿದ ಎರಡು ದಿನಗಳ ಬಳಿಕ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕಾನೂನು ಜಾರಿ ನಿರ್ದೇಶನಾಲಯದ ಲಾಕಪ್‍ನಿಂದ ಎರಡನೇ ಆದೇಶವನ್ನು ಹೊರಡಿಸಿದ್ದಾರೆ. ಮುಖ್ಯಮಂತ್ರಿಯವರ ಹೊಸ ಆದೇಶವನ್ನು ದಿಲ್ಲಿ ಸಚಿವ ಸೌರಭ್ ಭಾರಧ್ವಾಜ್ ಬಿಡುಗಡೆ ಮಾಡಿದ್ದಾರೆ. ಸರ್ಕಾರಿ ಸ್ವಾಮ್ಯದ ಎಲ್ಲ ಮೊಹಲ್ಲಾ ಕ್ಲಿನಿಕ್‍ಗಳಲ್ಲಿ ಉಚಿತ ಔಷಧಿಗಳ ವಿತರಣೆಯನ್ನು ಮತ್ತು ರೋಗಪತ್ತೆ ಪರೀಕ್ಷೆಗಳನ್ನು ಉಚಿತವಾಗಿ ಮಾಡುವುದನ್ನು ಈ ಆದೇಶ ಖಾತ್ರಿಪಡಿಸುತ್ತದೆ.

ಮುಖ್ಯಮಂತ್ರಿಯವರನ್ನು ಜೈಲಿಗೆ ಕಳುಹಿಸಿರುವುದರಿಂದ ದಿಲ್ಲಿ ನಾಗರಿಕರಿಗೆ ಯಾವುದೇ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಮುಖ್ಯಮಂತ್ರಿಯವರು ಈ ಆದೇಶ ಹೊರಡಿಸಿದ್ದಾರೆ ಎಂದು ಭಾರಧ್ವಾಜ್ ಸ್ಪಷ್ಟಪಡಿಸಿದ್ದಾರೆ.

"ಅವರು ಒಳಗಿರಲಿ; ಹೊರಗಿರಲಿ, ಸೌಲಭ್ಯ ವಂಚಿತ ವ್ಯಕ್ತಿಯೊಬ್ಬ ಸರ್ಕಾರಿ ಆಸ್ಪತ್ರೆಗೆ ಔಷಧಿಗಾಗಿ ತೆರಳಿದಾಗ ಅದು ಅವರಿಗೆ ಲಭ್ಯವಾಗಬೇಕು. ಮಧ್ಯಮವರ್ಗದ ಜನತೆ ಔಷಧಿ ಖರೀದಿಸಬಹುದು. ಆದರೆ ದಿಲ್ಲಿಯ ಲಕ್ಷಾಂತರ ಮಂದಿ ಬಡವರು ಸರ್ಕಾರಿ ಆಸ್ಪತ್ರೆಗಳು ಹಾಗೂ ಮೊಹಲ್ಲಾ ಕ್ಲಿನಿಕ್‍ಗಳನ್ನು ಅವಲಂಬಿಸಿದ್ದಾರೆ. ಈ ಕೆಲವೊಂದು ಔಷಧಿಗಳನ್ನು ಜೀವಿತಾವಧಿಯುದ್ದಕ್ಕೂ ತೆಗೆದುಕೊಳ್ಳಬೇಕಾಗುತ್ತದೆ" ಎಂದು ಆರೋಗ್ಯ ಖಾತೆಯನ್ನೂ ಹೊಂದಿರುವ ಅವರು ವಿವರಿಸಿದ್ದಾರೆ.

ನಿಯತವಾದ ರಕ್ತ ಪರೀಕ್ಷೆಗಾಗಿ ಕೂಡಾ ದೆಹಲಿಯ ಹಲವು ಮಂದಿ ಸರ್ಕಾರಿ ಮತ್ತು ಮೊಹಲ್ಲಾ ಆಸ್ಪತ್ರೆಗಳನ್ನು ಅವಲಂಬಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News