“ಆತನ ನಿರ್ಧಾರದ ಬಗ್ಗೆ ಆತನಲ್ಲೇ ಕೇಳಿ”: ವರುಣ್ ಗಾಂಧಿಗೆ ಬಿಜೆಪಿ ಟಿಕೆಟ್‌ ನಿರಾಕರಣೆ ಕುರಿತು ಮೇನಕಾ ಗಾಂಧಿ ಪ್ರತಿಕ್ರಿಯೆ

Update: 2024-04-02 10:18 GMT

ಮೇನಕಾ ಗಾಂಧಿ | Photo: PTI 

ಸುಲ್ತಾನ್ ಪುರ (ಉತ್ತರ ಪ್ರದೇಶ): ಬಿಜೆಪಿ ಸಂಸದ ವರುಣ್ ಗಾಂಧಿ ಅವರಿಗೆ ಪಿಲಿಭೀತ್ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿರುವ ಕುರಿತು ಅವರ ತಾಯಿ ಹಾಗೂ ಸಂಸದೆಯಾದ ಮೇನಕಾ ಗಾಂಧಿ ತಮ್ಮ ಮೌನ ಮುರಿದಿದ್ದು, ನಾನು ಪಕ್ಷದ ಭಾಗವಾಗಿರುವುದಕ್ಕೆ ಸಂತಸವಿದೆ ಎಂದು ಹೇಳಿದ್ದಾರೆ. ಅವರು 10 ದಿನಗಳ ಭೇಟಿಗಾಗಿ ಉತ್ತರ ಪ್ರದೇಶದ ಸುಲ್ತಾನ್ ಪುರಕ್ಕೆ ಆಗಮಿಸಿದ್ದಾರೆ.

ಈಗ ವರುಣ್ ಗಾಂಧಿ ಏನು ಮಾಡುತ್ತಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ, “ಆತ ಏನು ಮಾಡಬೇಕು ಎಂದು ಬಯಸುತ್ತಾನೆ ಎಂದು ಆತನನ್ನೇ ಕೇಳಿ. ನಾವು ಇದನ್ನು ಚುನಾವಣೆಯ ನಂತರ ಪರಿಗಣಿಸುತ್ತೇವೆ. ಈಗ ಸಮಯವಿಲ್ಲ” ಎಂದು ಮೇನಕಾ ಗಾಂಧಿ ಪ್ರತಿಕ್ರಿಯಿಸಿದ್ದಾರೆ.

“ನಾನು ಬಿಜೆಪಿಯಲ್ಲಿರುವುದಕ್ಕೆ ತುಂಬಾ ಸಂತಸಗೊಂಡಿದ್ದೇನೆ. ನನಗೆ ಟಿಕೆಟ್ ನೀಡಿದ್ದಕ್ಕೆ ಅಮಿತ್ ಶಾ, ಪ್ರಧಾನಿ ಮೋದಿ, ನಡ್ಡಾ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಟಿಕೆಟ್ ತಡವಾಗಿ ಪ್ರಕಟಗೊಂಡಿದ್ದರಿಂದ ನಾನು ಎಲ್ಲಿಂದ ಸ್ಪರ್ಧಿಸಬೇಕು ಎಂದ ದ್ವಂದ್ವದಲ್ಲಿದ್ದೆ. ಅದು ಪಿಲಿಭೀತ್ ಅಥವಾ ಸುಲ್ತಾನ್ ಪುರವೊ ಎಂಬ ಗೊಂದಲವಾಗಿತ್ತು. ಆದರೆ, ಈಗ ಪಕ್ಷವು ತೆಗೆದುಕೊಂಡಿರುವ ನಿರ್ಧಾರಕ್ಕೆ ನಾನು ಕೃತಜ್ಞಳಾಗಿದ್ದೇನೆ” ಎಂದು ಅವರು ಹೇಳಿದರು.

ಬಿಜೆಪಿ ಟಿಕೆಟ್ ಪ್ರಕಟಗೊಂಡ ನಂತರ ಸುಲ್ತಾನ್ ಪುರಕ್ಕೆ ಮೊದಲ ಬಾರಿಗೆ ಭೇಟಿ ನೀಡಿರುವ ಮೇನಕಾ ಗಾಂಧಿ, 10 ದಿನಗಳ ಕಾಲ ಈ ಲೋಕಸಭಾ ಕ್ಷೇತ್ರದ ಎಲ್ಲ 101 ಗ್ರಾಮಗಳಲ್ಲಿ ಸಂಚರಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News