ಗುಡ್ಡಗಳ ಕಡಿತವನ್ನು ಪ್ರಶ್ನಿಸಿದ ವರದಿಗಾರನ ಮುಸ್ಲಿಮ್ ಗುರುತನ್ನು ಬೆಟ್ಟು ಮಾಡಿದ ಅಸ್ಸಾಂ ಸಿಎಂ ಶರ್ಮಾ

Update: 2024-08-23 11:15 GMT

 ಹಿಮಂತ ಬಿಸ್ವ ಶರ್ಮಾ | PTI 

ಗುವಾಹಟಿ: ಸ್ಥಳೀಯ ವೆಬ್ ಪೋರ್ಟಲ್ ‘NewzNow’ದ ವರದಿಗಾರ ಶಾ ಆಲಂ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ಕೋಮು ವಾಗ್ದಾಳಿಗೆ ಇತ್ತೀಚಿನ ಗುರಿಯಾಗಿದ್ದಾರೆ. ಮುಖ್ಯಮಂತ್ರಿಗಳ ವಿಧಾನಸಭಾ ಕ್ಷೇತ್ರವಾದ ಜಲುಕ್‌ಬಾರಿಯಲ್ಲಿ ಗುಡ್ಡಗಳನ್ನು ಕಡಿಯುತ್ತಿರುವುದನ್ನು ಕುರಿತು ಆಲಂ ಪ್ರಶ್ನಿಸಿದ್ದರು ಮತ್ತು ಶರ್ಮಾ ಅವರ ಧರ್ಮವನ್ನು ಉಲ್ಲೇಖಿಸುವ ಮೂಲಕ ಪ್ರಶ್ನೆಯಿಂದ ನುಣುಚಿಕೊಳ್ಳಲು ಪ್ರಯತ್ನಿಸಿದ್ದರು ಎಂದು newslaundry.com ವರದಿ ಮಾಡಿದೆ.

ಶರ್ಮಾ ಈ ಹಿಂದೆ ಗುವಾಹಟಿಯಲ್ಲಿ ನೆರೆಯುಂಟಾಗಲು ಮೇಘಾಲಯದ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ (ಯುಎಸ್‌ಟಿಎಂ) ತನ್ನ ಕ್ಯಾಂಪಸ್ ನಿರ್ಮಾಣಕ್ಕಾಗಿ ಮರಗಳನ್ನು ಮತ್ತು ಗುಡ್ಡಗಳನ್ನು ಕಡಿದಿದ್ದು ಕಾರಣವಾಗಿದೆ ಮತ್ತು ಅದು ‘ಪ್ರವಾಹ ಜಿಹಾದ್’ ನಡೆಸುತ್ತಿದೆ ಎಂದು ಆರೋಪಿಸಿದ್ದರು. ಬಂಗಾಳಿ ಮುಸ್ಲಿಮ್ ಮಹಬೂಬುಲ್ ಹಕ್ ನಡೆಸುತ್ತಿರುವ ಈ ವಿವಿಯು ಗುವಾಹಟಿ ನಗರದ ಹೊರವಲಯದಿಂದ ಆರು ಕಿ.ಮೀ.ದೂರದಲ್ಲಿ ಎತ್ತರದ ಪ್ರದೇಶದಲ್ಲಿದೆ.

ಬುಧವಾರ ಅಸ್ಸಾಂ ವಿಧಾನಸಭೆಯ ಹೊರಗೆ ಚಿತ್ರೀಕರಿಸಲಾದ ವೀಡಿಯೊ, ಮಂದಕಾಟಾ ಪ್ರದೇಶದಲ್ಲಿ ಗುಡ್ಡಗಳನ್ನು ಕಡಿಯಲಾಗುತ್ತಿದೆ ಎಂಬ ವರದಿಗಳ ಕುರಿತು ಆಲಂ ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ್ದನ್ನು ತೋರಿಸಿದೆ. ಯುಎಸ್‌ಎಂಟಿ ಮತ್ತು ಹಕ್‌ರನ್ನು ರಕ್ಷಿಸಲು ಈ ಪ್ರಶ್ನೆಯನ್ನು ಕೇಳಲಾಗಿದೆ ಎಂದು ಪ್ರತಿಕ್ರಿಯಿಸಿದ್ದ ಶರ್ಮಾ,‘ನೀವೇಕೆ ಯುಎಸ್‌ಟಿಎಂ ಅನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದೀರಿ? ಕಾರಣವೇನು? ನೀವು ಅವರಿಂದ ಜಾಹೀರಾತುಗಳನ್ನು ಸ್ವೀಕರಿಸುತ್ತೀರಾ?’ಎಂದು ಪ್ರಶ್ನಿಸಿದ್ದರು.

ನಿಮ್ಮ ಹೆಸರೇನು ಎಂದು ಶರ್ಮಾ ಪ್ರಶ್ನಿಸಿದಾಗ ಆಲಂ ತನ್ನ ಹೆಸರನ್ನು ಹೇಳಿದ್ದರು. ‘ಶಾ ಆಲಂ ಮತ್ತು ಯುಎಸ್‌ಟಿಎಮ್‌ನ ಮಹಬೂಬುಲ್ ಹಕ್‌ರಂತಹ ನೀವೆಲ್ಲ ಒಂದಾಗಿರುವ ರೀತಿಯಿಂದ ನಾವೂ ಬದುಕಲಾದರೂ ಸಾಧ್ಯವೇ? ಅಸ್ಸಾಮಿನಲ್ಲಿ ಉಳಿಯಲು ನಮಗೆ ಸಾಧ್ಯವಾಗುತ್ತದೆಯೇ ಇಲ್ಲವೇ ಎನ್ನುವುದನ್ನು ಆಲಂ ಮತ್ತು ಹಕ್ ವಿವರಿಸುವ ಅಗತ್ಯವಿದೆ’ ಎಂದು ಶರ್ಮಾ ಹೇಳಿದ್ದರು.

ಶರ್ಮಾ ಅವರ ಹೇಳಿಕೆಯು ಆಗಾಗ್ಗೆ ಅವರ ಪರೋಕ್ಷ ಉಲ್ಲೇಖವನ್ನು ಧ್ವನಿಸಿತ್ತು. ಮುಸ್ಲಿಮರು ಅಸ್ಸಾಮಿನ ಸ್ಥಳೀಯ ಜನರಿಗೆ ಬೆದರಿಕೆಯಾಗಿದ್ದಾರೆ ಎಂದು ಶರ್ಮಾ ಇತ್ತೀಚಿನ ದಿನಗಳಲ್ಲಿ ಪದೇ ಪದೇ ಹೇಳುತ್ತಿದ್ದಾರೆ, ತನ್ಮೂಲಕ ತನ್ನ ಮಾತುಗಳಿಗೆ ಕೋಮು ಬಣ್ಣವನ್ನು ನೀಡುತ್ತಿದ್ದಾರೆ.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಆಲಂ, ಮುಖ್ಯಮಂತ್ರಿಗಳ ಹೇಳಿಕೆಯಿಂದ ತನಗೆ ಅವಮಾನವಾಗಿದೆ ಎಂದು ಹೇಳಿದರು. ‘ಓರ್ವ ಪತ್ರಕರ್ತನಾಗಿ ಪ್ರಶ್ನೆಗಳನ್ನು ಕೇಳುವುದು ನನ್ನ ಕರ್ತವ್ಯ. ನಾನು ಪ್ರಾಮಾಣಿಕವಾದ ಪ್ರಶ್ನೆಯನ್ನೇ ಕೇಳಿದ್ದೆ. ಅಲ್ಲದೆ ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿ ಗುಡ್ಡ ಕಡಿತ ನಡೆಯುತ್ತಿರುವುದನ್ನು ಮುಖ್ಯವಾಹಿನಿಯ ಸುದ್ದಿವಾಹಿನಿಗಳೂ ತೋರಿಸಿವೆ,ಆದರೆ ನನ್ನ ಪ್ರಶ್ನೆಗೆ ಉತ್ತರಿಸುವ ಬದಲು ಮುಖ್ಯಮಂತ್ರಿಗಳು ನನ್ನ ಧರ್ಮವನ್ನು ಬೆಟ್ಟು ಮಾಡುವ ಮೂಲಕ ಅದಕ್ಕೆ ಕೋಮು ಬಣ್ಣ ನೀಡಿದ್ದರು’ ಎಂದು ಹೇಳಿದರು.

ಪ್ರಜಾಪ್ರಭುತ್ವ ದೇಶದಲ್ಲಿ ಪತ್ರಕರ್ತನೋರ್ವ ಪ್ರಶ್ನೆಯನ್ನು ಕೇಳುವ ಮುನ್ನ ತನ್ನ ಧರ್ಮವನ್ನು ಹೇಳಬೇಕೇ ಎಂದು ಅವರು ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News