ಅಸ್ಸಾಂನಲ್ಲಿ ಒಂದು ತಿಂಗಳ ಅವಧಿಯಲ್ಲಿ ನಾಲ್ಕು ಗುಂಪು ಥಳಿತ, ಹತ್ಯೆ ಪ್ರಕರಣಗಳು

Update: 2023-08-18 09:59 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಅಸ್ಸಾಂನಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಕಳ್ಳತನದ ಶಂಕೆಯ ಮೇಲೆ ನಾಲ್ಕು ಜನರು ಗುಂಪು ಥಳಿತಕ್ಕೊಳಗಾಗಿ ಹತ್ಯೆಗೀಡಾಗಿದ್ದಾರೆ. ಈ ನಾಲ್ಕು ಪ್ರಕರಣಗಳಲ್ಲಿ ಎರಡು ಪ್ರಕರಣಗಳು ಆಗಸ್ಟ್‌ 17, ಗುರುವಾರದಂದು ನಡೆದಿದೆ.

ದರ್ರಂಗ್‌ ಜಿಲ್ಲೆಯ ಪದ್ಮಝರ್‌ ಎಂಬಲ್ಲಿ 45 ವರ್ಷದ ಮಜಿಬುಲ್‌ ಹಖ್‌ ಎಂಬಾತನನ್ನು ಆಡುಗಳ ಕಳ್ಳತನ ನಡೆಸಿದ್ದಾನೆಂಬ ಶಂಕೆಯಲ್ಲಿ ಹತ್ಯೆಗೈಯ್ಯಲಾಗಿದ್ದರೆ, ತಮುಲ್ಪುರ್‌ ಜಿಲ್ಲೆಯ ಟಿನಿಪುಖುರಿ ಎಂಬಲ್ಲಿ ಯಾರದ್ದೋ ಮನೆಯಲ್ಲಿ ಕಳ್ಳತನ ಮಾಡಿದ್ದಾನೆಂದು ಆರೋಪಿಸಿ 27 ವರ್ಷದ ಬಿನೋದ್‌ ಬ್ರಹ್ಮ ಎಂಬಾತನನ್ನು ಕೊಲೆ ಮಾಡಲಾಗಿದೆ.

ಹಖ್‌ ಹತ್ಯೆ ಪ್ರಕರಣದಲ್ಲಿ 14 ಜನರನ್ನು ಬಂಧಿಸಲಾಗಿದ್ದರೆ ಇನ್ನೊಂದು ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ.

ಆಗಸ್ಟ್‌ 12ರಂದು ಹೊಜಯ್‌ ಜಿಲ್ಲೆಯಲ್ಲಿ ಗೋ ಕಳ್ಳತನ ಆರೋಪದ ಮೇಲೆ ಹಿಫ್ಝುರ್‌ ರಹಮಾನ್‌ ಎಂಬಾತನನ್ನು ಹತ್ಯೆಗೈಯ್ಯಲಾಗಿತ್ತು. ಈ ಪ್ರಕರಣ ಸಂಬಂಧ ಎಂಟು ಮಂದಿಯನ್ನು ಬಂಧಿಸಲಾಗಿದೆ.

ಜುಲೈ 24ರಂದು ಮೋರಿಗಾವ್‌ ಜಿಲ್ಲೆಯಲ್ಲಿ ಸದ್ದಾಂ ಹುಸೈನ್‌ ಎಂಬಾತನನ್ನೂ ಗೋಕಳ್ಳತನ ಆರೋಪದಲ್ಲಿ ಥಳಿಸಿ ಹತ್ಯೆಗೈಯ್ಯಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿಗಳು ಇನ್ನೂ ಇಬ್ಬರಿಗೆ ಥಳಿಸಿದ್ದರು. ಈ ಸಂಬಂಧ ಐದು ಜನರನ್ನು ಬಂಧಿಸಲಾಗಿದೆ.

ಈ ಹತ್ಯೆ ಪ್ರಕರಣಗಳ ಬಗ್ಗೆ ಪ್ರತಿಕ್ರಿಯಿಸಿದ ಅಸ್ಸಾಂ ಡಿಜಿಪಿ ಜಿ ಪಿ ಸಿಂಗ್‌, ಎಲ್ಲಾ ಪ್ರಕರಣಗಳಲ್ಲಿ ಕಾನೂನಿನ ಪ್ರಕಾರ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ. ಜಾತಿ, ಮತ ಬೇಧವಿಲ್ಲದೇ ಎಲ್ಲಾ ಪ್ರಕರಣಗಳಲ್ಲಿ ನಿಷ್ಪಕ್ಷಪಾತವಾಗಿ ಕ್ರಮಕೈಗೊಳ್ಳಬೇಕೆಂದೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಸೂಚಿಸಿದ್ದಾಗಿ ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News