ಅಸ್ಸಾಂ ಮುಖ್ಯಮಂತ್ರಿ ಅತ್ಯಂತ ಭ್ರಷ್ಟ: ರಾಹುಲ್ ಗಾಂಧಿ ಆರೋಪ

Update: 2024-01-23 16:45 GMT

ಹಿಮಾಂತ್ ಬಿಸ್ವಾ ಶರ್ಮಾ, ರಾಹುಲ್ ಗಾಂಧಿ | Photo: PTI

ದಿಸ್ಪುರ: ಅಸ್ಸಾಂ ಮುಖ್ಯಮಂತ್ರಿ ಹಿಮಾಂತ್ ಬಿಸ್ವಾ ಶರ್ಮಾ ಅವರು ದೇಶದ ಅತ್ಯಂತ ಭ್ರಷ್ಟ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಆರೋಪಿಸಿದ್ದಾರೆ.

ಅತ್ಯಧಿಕ ನಿರುದ್ಯೋಗ, ಅತಿ ಹೆಚ್ಚು ಭ್ರಷ್ಟಾಚಾರ, ಭಾರೀ ಬೆಲೆ ಏರಿಕೆ, ರೈತರ ಹೋರಾಟ, ಯುವ ಜನರಿಗೆ ಉದ್ಯೋಗವಕಾಶದ ಕೊರತೆ ಕುರಿತು ಮುಖ್ಯಮಂತ್ರಿ ವಿರುದ್ಧ ಅಸ್ಸಾಂ ಜನರು ತನ್ನಲ್ಲಿ ದೂರಿದ್ದಾರೆ. ಈ ಸಮಸ್ಯೆಗಳನ್ನೇ ನಾವು ಕೂಡ ಎತ್ತುತ್ತಿರುವುದು. ನಾವು ಈ ದಿಶೆಯಲ್ಲಿ ಯಶಸ್ವಿಯಾಗುತ್ತಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಅಸ್ಸಾಂನಲ್ಲಿ ನ್ಯಾಯ ಯಾತ್ರೆ ಎದುರಿಸಿದ ನಿರ್ಬಂಧದ ಕುರಿತು ರಾಹುಲ್ ಗಾಂಧಿ, ಅಸ್ಸಾಂ ಮುಖ್ಯಮಂತ್ರಿ ಅವರು ನ್ಯಾಯ ಯಾತ್ರೆಯ ವಿರುದ್ಧ ಕೈಗೊಳ್ಳುತ್ತಿರುವ ಕ್ರಮ ನಮಗೆ ನೆರವಾಗುತ್ತಿದೆ. ನಮಗೆ ಪ್ರಚಾರ ಸಿಗುತ್ತಿದೆ. ಈಗ ನ್ಯಾಯ ಯಾತ್ರೆ ಅಸ್ಸಾಂನಲ್ಲಿ ಪ್ರಮುಖ ವಿಷಯವಾಗಿದೆ. ದೇವಾಲಯ, ಕಾಲೇಜುಗಳಿಗೆ ಭೇಟಿ ನೀಡಲು ಅವಕಾಶ ನೀಡದಿರುವುದು ಅವರ ಸೂಚನೆಯಿಂದಾಗಿದೆ. ನಾವು ಅವರಿಗೆ ಹೆದರುವುದಿಲ್ಲ ಎಂದಿದ್ದಾರೆ.

ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರ ಆದೇಶದಂತೆ ಮೇಘಾಲಯದ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಲು ತನಗೆ ನಿರ್ಬಂಧ ವಿಧಿಸಲಾಗಿದೆ ಎಂದು ರಾಹುಲ್‌ ಗಾಂಧಿ ಮಂಗಳವಾರ ಆರೋಪಿಸಿದ್ದಾರೆ.

ಕಾಂಗ್ರೆಸ್‌ ನ ‘ಭಾರತ್ ಜೋಡೊ ನ್ಯಾಯ ಯಾತ್ರೆ’ಯ ಭಾಗವಾಗಿ ಅಸ್ಸಾಂನ ಗಡಿಯ ಸಮೀಪದ ಮೇಘಾಲಯದ ರಿ ಭೋಯಿ ಜಿಲ್ಲೆಯಲ್ಲಿರುವ ವಿಜ್ಞಾನ ಹಾಗೂ ತಂತ್ರಜ್ಞಾನ ವಿಶ್ವವಿದ್ಯಾನಿಲಯಕ್ಕೆ ರಾಹುಲ್ ಗಾಂಧಿ ಭೇಟಿಯನ್ನು ನಿಗದಿಪಡಿಸಲಾಗಿತ್ತು. ಆದರೆ, ರಾಹುಲ್ ಗಾಂಧಿ ಭೇಟಿಯ ಅನುಮತಿಯನ್ನು ವಿಶ್ವವಿದ್ಯಾನಿಲಯ ಹಿಂಪಡೆದುಕೊಂಡ ಬಳಿಕ ಕಾರ್ಯಕ್ರಮವನ್ನು ಸಮೀಪದ ಹೊಟೇಲ್‌ ಗೆ ವರ್ಗಾಯಿಸಲಾಗಿತ್ತು.

‘‘ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಸ್ಸಾಂ ಮುಖ್ಯಮಂತ್ರಿಗೆ ಕರೆ ಮಾಡಿದ್ದಾರೆ. ಅನಂತರ ಅಸ್ಸಾಂ ಮುಖ್ಯಮಂತ್ರಿಯ ಕಚೇರಿ ನಿಮ್ಮ ವಿಶ್ವವಿದ್ಯಾನಿಲಯದ ಮುಖ್ಯಸ್ಥರಿಗೆ ಕರೆ ಮಾಡಿದ್ದಾರೆ. ಅಲ್ಲದೆ, ರಾಹುಲ್ ಗಾಂಧಿ ಅವರು ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಲು ಅವಕಾಶ ನೀಡದಂತೆ ತಿಳಿಸಿದ್ದಾರೆ’’ ಎಂದು ರಾಹುಲ್ ಗಾಂಧಿ ತನ್ನ ಬಸ್‌ ನ ಟಾಪ್ ನಲ್ಲಿ ನಿಂತು ವಿದ್ಯಾರ್ಥಿಗಳ ಮುಂದೆ ಆರೋಪಿಸಿದರು.

ಆರೆಸ್ಸೆಸ್ ಹಾಗೂ ದೇಶದ ನಾಯಕತ್ವವನ್ನು ನೀವು ಕಣ್ಣು ಮುಚ್ಚಿ ಒಪ್ಪಿಕೊಳ್ಳಬೇಕೆಂದು ಹೇಳಲಾಗುತ್ತಿದೆ ಎಂದು ರಾಹುಲ್ ಗಾಂಧಿ ತಿಳಿಸಿದರು.

ಅನಂತರ ರಾಹುಲ್ ಗಾಂಧಿ ಅವರ ಸರಣಿ ವಾಹನವನ್ನು ಗುವಾಹಟಿಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಯಾತ್ರೆಯ ಪಥವನ್ನು ಹೊರವಲಯಕ್ಕೆ ಬದಲಾಯಿಸಬೇಕಾಯಿತು. ಸಂಚಾರ ಸಮಸ್ಯೆಯ ಕಾರಣದಿಂದ ಯಾತ್ರೆ ನಗರದ ಮೂಲಕ ಹಾದು ಹೋಗಲು ಅವಕಾಶ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಹಿಮಾಂತ್ ಬಿಸ್ವಾ ಶರ್ಮಾ ಹೇಳಿದ್ದರು.

ರಾಜ್ಯ ಸರಕಾರದ ನಿರ್ಧಾರ ಕಾಂಗ್ರೆಸ್‌ ನ ಪ್ರತಿಭಟನೆಗೆ ಕಾರಣವಾಯಿತು. ಕಾಂಗ್ರೆಸ್ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು ಹಾಗೂ ಕೆಲವು ಬ್ಯಾರಿಕೇಡ್ ಗಳನ್ನು ಮುರಿದು ಹಾಕಿದರು. ನಾವು ಬ್ಯಾರಿಕೇಡ್ ಗಳನ್ನು ಮುರಿದಿದ್ದೇವೆ, ಆದರೆ, ಕಾನೂನನ್ನು ಮುರಿಯಲಾರೆವು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ನಗರದ ಹೊರವಲಯದಲ್ಲಿ ಪಕ್ಷದ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರು ಇದೇ ದಾರಿಯಿಂದಾಗಿ ಪ್ರಯಾಣಿಸಿದರು. ಅವರಿಗೆ ಅವಕಾಶ ನೀಡಲಿಲ್ಲವೇ ಎಂದು ಪ್ರಶ್ನಿಸಿದರು.

‘‘ನಾವು ದುರ್ಬಲರು ಎಂದು ಭಾವಿಸಬೇಡಿ. ಅವರು ವಿಶ್ವವಿದ್ಯಾನಿಲಯದ ನಮ್ಮ ಕಾರ್ಯಕ್ರಮಗಳನ್ನು ರದ್ದುಗೊಳಿಸಿರಬಹುದು. ಆದರೆ, ವಿಶ್ವವಿದ್ಯಾನಿಲಯದ ಹೊರಗೆ ವಿದ್ಯಾರ್ಥಿಗಳು ನನ್ನ ಮಾತುಗಳನ್ನು ಆಲಿಸಿದ್ದಾರೆ’’ ಎಂದು ಅವರು ಹೇಳಿದ್ದಾರೆ.

‘‘ಕಾಂಗ್ರೆಸ್ ಕಾರ್ಯಕರ್ತರು ಯಾರಿಗೂ ಭಯ ಪಡುವುದಿಲ್ಲ. ನಾವು ಅಸ್ಸಾಂನಲ್ಲಿ ಬಿಜೆಪಿಯನ್ನು ಸೋಲಿಸಲಿದ್ದೇವೆ ಹಾಗೂ ಕಾಂಗ್ರೆಸ್ ಸರಕಾರವನ್ನು ರಚಿಸಲಿದ್ದೇವೆ’’ ಎಂದು ಅವರು ಹೇಳಿದರು.

ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಲು ಅಸ್ಸಾಂ ಸಿಎಂ ನಿರ್ದೇಶ

ಜನರನ್ನು ಪ್ರಚೋದಿಸುತ್ತಿರುವ ಆರೋಪದಲ್ಲಿ ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸುವಂತೆ ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಅವರು ಮಂಗಳವಾರ ಪೊಲೀಸರಿಗೆ ನಿರ್ದೇಶಿಸಿದ್ದಾರೆ.

‘‘ಇದು ಅಸ್ಸಾಮಿ ಸಂಸ್ಕೃತಿ ಅಲ್ಲ. ನಮ್ಮದು ಶಾಂತಿಯುತ ರಾಜ್ಯ. ಇಂತಹ ನಕ್ಸಲೀಯ ತಂತ್ರಗಳು ನಮ್ಮ ಸಂಸ್ಕೃತಿಗೆ ಸಂಪೂರ್ಣ ಅನ್ಯ. ಜನರನ್ನು ಪ್ರಚೋದಿಸುತ್ತಿರುವುದಕ್ಕೆ ನಿಮ್ಮ ನಾಯಕನ ವಿರುದ್ಧ ಪ್ರಕರಣ ದಾಖಲಿಸುವಂತೆ ಹಾಗೂ ನೀವು ನಿಮ್ಮ ಹ್ಯಾಂಡಲ್ ನಲ್ಲಿ ಪೋಸ್ಟ್ ಮಾಡಿದ ದೃಶ್ಯಾವಳಿಗಳನ್ನು ಸಾಕ್ಷ್ಯವಾಗಿ ಬಳಸುವಂತೆ ನಾನು ಅಸ್ಸಾಂ ಪೊಲೀಸರಿಗೆ ಸೂಚಿಸಿದ್ದೇನೆ ’’ ಎಂದು ಅಸ್ಸಾಂ ಮುಖ್ಯಮಂತ್ರಿ ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News