ಅಸ್ಸಾಂ ಸಿಎಂ ಪತ್ನಿಗೆ ಸರ್ಕಾರದ ಸಬ್ಸಿಡಿ ಆರೋಪ: ಮಧ್ಯಸ್ಥಿಕೆ ವಹಿಸಲು ಕೇಂದ್ರ ಸಚಿವರ ಮೇಲೆ ಒತ್ತಡ

Update: 2023-09-18 16:29 GMT

 ಹಿಮಂತ ಬಿಸ್ವಾ ಶರ್ಮಾ| Photo: PTI \Twitter

ಗುವಾಹಟಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ಸರ್ಕಾರದ ಸಬ್ಸಿಡಿ ಪಡೆದಿರುವ ಬಗೆಗಿನ ವಾಸ್ತವಾಂಶವನ್ನು ಹೊರತರಲು ಕೇಂದ್ರ ಸಚಿವ ಪಿಯೂಷ್ ಗೋಯಲ್ ಮಧ್ಯಸ್ಥಿಕೆ ವಹಿಸಬೇಕು ಎಂದು ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್ ಸೋಮವಾರ ಕೋರಿದ್ದಾರೆ.

ಸಿಎಂ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅಧ್ಯಕ್ಷೆ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿರುವ ಪ್ರೈಡ್ ಈಸ್ಟ್ ಎಂಟರ್‌ಟೈನ್‌ಮೆಂಟ್‌ ಸಂಸ್ಥೆಯು ನಾಗಾವ್ ಜಿಲ್ಲೆಯ ಕಲಿಯಾಬೋರ್‌ನ ದರಿಗಾಜಿ ಗ್ರಾಮದಲ್ಲಿ 50 ಬಿಘಾ (ಸುಮಾರು 17 ಎಕರೆ) ಕೃಷಿ ಭೂಮಿಯನ್ನು ಖರೀದಿಸಿದ ಒಂದು ತಿಂಗಳೊಳಗೆ ಕೈಗಾರಿಕಾ ಭೂಮಿ ಎಂದು ಮರು ವರ್ಗೀಕರಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಎದ್ದಿವೆ.

“ಪ್ರಧಾನ ಮಂತ್ರಿ ಕಿಸಾನ್ ಸಂಪದಾ ಯೋಜನೆ (ಪಿಎಂಕೆಎಸ್‌ವೈ) ಮತ್ತು ಆಗ್ರೋ ಕ್ಲಸ್ಟರ್‌ಗಳಿಗೆ ಮೂಲಸೌಕರ್ಯಗಳ ರಚನೆಯ ಯೋಜನೆಯಡಿ ಆಹಾರ ಸಂಸ್ಕರಣಾ ಸಚಿವಾಲಯವು ಎಂ/ಎಸ್ ಪ್ರೈಡ್ ಈಸ್ಟ್ ಎಂಟರ್‌ಟೈನ್‌ಮೆಂಟ್‌ಗೆ 10 ಕೋಟಿ ರೂ.ಗಳನ್ನು ಮಂಜೂರು ಮಾಡಿರುವುದು ಗಮನಕ್ಕೆ ಬಂದಿದೆ" ಎಂದು ಲೋಕಸಭೆಯ ಕಾಂಗ್ರೆಸ್‌ ಉಪ ನಾಯಕ ಗೊಗೋಯ್ ತಿಳಿಸಿದ್ದಾರೆ.

ಆಹಾರ ಸಂಸ್ಕರಣಾ ಉದ್ಯಮಗಳ ಸಚಿವಾಲಯದ ವೆಬ್‌ಸೈಟ್‌ನಲ್ಲಿರುವ ಫಲಾನುಭವಿಗಳ ಪಟ್ಟಿಯಲ್ಲಿ ಇದು ಸ್ಪಷ್ಟವಾಗಿದೆ. ಆದರೆ, ಹಿಮಂತ್‌ ಬಿಸ್ವಾ ಶರ್ಮ ಅವರು ಇದನ್ನು ನಿರಾಕರಿಸಿದ್ದಾರೆ. ಹಾಗಾಗಿ, ಈ ಬಗ್ಗೆ ಸಾರ್ವಜನಿಕ ಪಾರದರ್ಶಕತೆ ಕಾಪಾಡಲು ಸಚಿವ ಪಿಯೂಷ್ ಗೋಯಲ್ ಅವರನ್ನು ಕಾಂಗ್ರೆಸ್‌ ನಾಯಕ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News