ಅಸ್ಸಾಮ್: ಬಾಲ್ಯ ವಿವಾಹ ಆರೋಪದಲ್ಲಿ ಹೊಸದಾಗಿ ಸಾವಿರಕ್ಕೂ ಅಧಿಕ ಮಂದಿ ಬಂಧನ

Update: 2023-10-03 15:32 GMT

ಸಾಂದರ್ಭಿಕ ಚಿತ್ರ | Photo : X

 

ಗುವಾಹಟಿ: ಅಸ್ಸಾಮ್ ನಲ್ಲಿ ಬಾಲ್ಯ ವಿವಾಹ ಪ್ರಕರಣಗಳಿಗೆ ಸಂಬಂಧಿಸಿ ಹೊಸದಾಗಿ 1,000ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಮಂಗಳವಾರ ಹೇಳಿದ್ದಾರೆ.

ಬಾರ್ಪೆಟ ಜಿಲ್ಲೆಯೊಂದರಲ್ಲೇ ಸೋಮವಾರ ಸಂಜೆಯಿಂದೀಚಿಗೆ, ಬಾಲ್ಯ ವಿವಾಹದ ಆರೋಪದಲ್ಲಿ 150 ಮಂದಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲೆಯ ಪೊಲೀಸ್ ಸೂಪರಿಂಟೆಂಡೆಂಟ್ ಅಮಿತಾಭ್ ಸಿನ್ಹಾ ತಿಳಿಸಿದ್ದಾರೆ.

ಬಾಲ್ಯ ವಿವಾಹಗಳಿಗೆ ಸಂಬಂಧಿಸಿ ಜನರನ್ನು ಬಂಧಿಸುತ್ತಿರುವುದು ಈ ವರ್ಷದಲ್ಲಿ ಇದೇ ಮೊದಲಲ್ಲ. ಮೊದಲ ಹಂತದ ಕಾರ್ಯಾಚರಣೆಯಲ್ಲಿ ಫೆಬ್ರವರಿಯಿಂದೀಚೆಗೆ 3,907 ಜನರನ್ನು ಬಂಧಿಸಲಾಗಿದೆ ಎಂದು ರಾಜ್ಯ ಸರಕಾರವು ಸೆಪ್ಟಂಬರ್ 11ರಂದು ವಿಧಾನಸಭೆಗೆ ತಿಳಿಸಿತ್ತು. ಈ ಪೈಕಿ, 3,319 ಜನರನ್ನು 2006ರ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಬಂಧಿಸಲಾಗಿತ್ತು.

ಅಸ್ಸಾಮ್ ಸರಕಾರವು ಬಾಲ್ಯ ವಿವಾಹಗಳ ವಿರುದ್ಧ ರಾಜ್ಯವ್ಯಾಪಿ ಕಾರ್ಯಾಚರಣೆ ನಡೆಸುವುದು ಹಾಗೂ 14 ವರ್ಷಕ್ಕಿಂತ ಕೆಳಗಿನ ಬಾಲಕಿಯರನ್ನು ಮದುವೆಯಾಗುವ ಪುರುಷರನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಕಾಯ್ದೆ (ಪೋಕ್ಸೊ)ಯಡಿ ಮತ್ತು 14ರಿಂದ 18 ವರ್ಷಗಳ ನಡುವಿನ ಬಾಲಕಿಯರನ್ನು ಮದುವೆಯಾಗುವವರನ್ನು ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ಬಂಧಿಸಲಾಗುವುದು ಎಂದು ಜನವರಿಯಲ್ಲಿ ಶರ್ಮ ಘೋಷಿಸಿದ್ದರು.

ಕಾರ್ಯಾಚರಣೆಯು 2026ರವರೆಗೂ ಮುಂದುವರಿಯುವುದು ಎಂದು ಮುಖ್ಯಮಂತ್ರಿ ಸೆಪ್ಟಂಬರ್ ನಲ್ಲಿ ಹೇಳಿದ್ದಾರೆ. 2026ರಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News