ಅಸ್ಸಾಂ: ಪೋಲಿಸ್ ‘ಎನ್‌ಕೌಂಟರ್’ನಲ್ಲಿ ಕೊಲ್ಲಲ್ಪಟ್ಟ ಮೂವರ ಶರೀರಗಳಲ್ಲಿ ಗುಂಡೇಟಿನ ಗಾಯಗಳಿಲ್ಲ:‌ ವೈದ್ಯಕೀಯ ವರದಿ

Update: 2024-08-09 10:10 GMT

ಸಾಂದರ್ಭಿಕ ಚಿತ್ರ

ಗುವಾಹಟಿ: ಕಳೆದ ತಿಂಗಳು ಕಾಚಾರ್ ಜಿಲ್ಲೆಯಲ್ಲಿ ಅಸ್ಸಾಂ ಪೋಲಿಸರೊಂದಿಗೆ ‘ಎನ್‌ಕೌಂಟರ್’ನಲ್ಲಿ ಕೊಲ್ಲಲ್ಪಟ್ಟ ಮೂವರು ಯುವಕರ ಶರೀರಗಳಲ್ಲಿ ಗುಪ್ತಾಂಗಗಳಲ್ಲಿ ಸೇರಿದಂತೆ ಗಾಯಗಳು ಮತ್ತು ಮೂಗೇಟುಗಳು ಕಂಡು ಬಂದಿವೆ, ಯಾವುದೇ ಗುಂಡೇಟಿನ ಗಾಯಗಳಿಲ್ಲ ಎಂದು ಮರಣೋತ್ತರ ಪರೀಕ್ಷೆ, ನಂತರದ ಅಂತಿಮ ಅಭಿಪ್ರಾಯ ಮತ್ತು ವಿಚಾರಣಾ ವರದಿಗಳು ಹಾಗೂ ಸರಕಾರದ ಅಫಿಡವಿಟ್ ದೃಢಪಡಿಸಿವೆ ಎಂದು ವರದಿಯಾಗಿದೆ.

ಮೃತರ ಕುಟುಂಬಗಳು ಚಿತ್ರಹಿಂಸೆ ಮತ್ತು ಕಾನೂನುಬಾಹಿರ ಹತ್ಯೆಯನ್ನು ಆರೋಪಿಸಿ ಗುವಾಹಟಿ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿಯನ್ನು ದಾಖಲಿಸಿದ್ದು, ರಾಜ್ಯದ ಹೊರಗಿನ ಅಧಿಕಾರಿಗಳೊಂದಿಗೆ ಸಿಬಿಐನಿಂದ ಸ್ವತಂತ್ರ ತನಿಖೆಗೆ ಮತ್ತು ತಲಾ ಒಂದು ಕೋಟಿ ರೂ.ಪರಿಹಾರಕ್ಕೆ ಆಗ್ರಹಿಸಿವೆ ಎಂದು ಅರ್ಜಿದಾರರ ಪರ ನ್ಯಾಯವಾದಿ ದೇವಸ್ಮಿತಾ ಘೋಷ್ ಹೇಳಿದರು.

ಮೂವರು ಯುವಕರ ಮೃತದೇಹಗಳಲ್ಲಿ ಸಾವಿಗೆ ಮುನ್ನ ಸಂಭವಿಸಿದ ಹಲವಾರು ಗಾಯಗಳಿವೆ, ಗುಪ್ತಾಂಗಗಳ ಮೇಲೆ ತರಚು ಗಾಯಗಳಂತಹ ಮೂಗೇಟುಗಳಿವೆ ಮತ್ತು ಕೇವಲ ಎನ್‌ಕೌಂಟರ್‌ನಿಂದ ಇಂತಹ ಗಾಯಗಳಾಗುವುದಿಲ್ಲ ಎಂದು ಘೋಷ್ ಸುದ್ದಿಸಂಸ್ಥೆಗೆ ತಿಳಿಸಿದರು.

ಕಾಚಾರ್‌ನ ಲಲ್ಲುಂಗಾವಿ ಹಮಾರ್(21) ಮತ್ತು ಲಾಲ್ಬಿಕುಂಗ್ ಹಮಾರ್(33) ಹಾಗೂ ಮಣಿಪುರದ ಜೋಷುವಾ(32) ಮೃತ ಯುವಕರಾಗಿದ್ದು,ಅಸ್ಸಾಂ ಪೋಲಿಸರು ಅವರನ್ನು ಶಂಕಿತ ಹಮಾರ್ ಉಗ್ರರು ಎಂದು ಬಣ್ಣಿಸಿದ್ದಾರೆ.

ಜು.17ರಂದು ಕಾಚಾರ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿನ ಭೀಕರ ಎನ್‌ಕೌಂಟರ್‌ನಲ್ಲಿ ಈ ಮೂವರು ಕೊಲ್ಲಲ್ಪಟ್ಟಿದ್ದು, ಘಟನಾ ಸ್ಥಳದಿಂದ ಹಲವಾರು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಸ್ಸಾಂ ಪೋಲಿಸರು ಹೇಳಿಕೊಂಡಿದ್ದರು.

ಬುಧವಾರ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಉಚ್ಚ ನ್ಯಾಯಾಲಯವು,ಶವಾಗಾರದಲ್ಲಿರುವ ಮೃತದೇಹಗಳನ್ನು ಅಂತ್ಯಸಂಸ್ಕಾರಕ್ಕೆ ಪಡೆದುಕೊಳ್ಳಲು ಕುಟುಂಬ ಸದಸ್ಯರು ಸಿದ್ಧರಿದ್ದಾರೆ ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡಿತು. ಅವರು ಮೃತದೇಹಗಳನ್ನು ರಾಜ್ಯದಿಂದ ಹೊರಕ್ಕೆ ಸಾಗಿಸಲು ಬಯಸಿದರೆ ಎಲ್ಲ ಅಗತ್ಯ ಏರ್ಪಾಡುಗಳನ್ನು ಮಾಡುವಂತೆ ಕಾಚಾರ್ ಜಿಲ್ಲಾ ಪೋಲಿಸ್ ಅಧೀಕ್ಷಕರಿಗೆ ಸೂಚಿಸಿತು.

ಮೂವರು ಯುವಕರ ಸಾವಿಗೆ ಕಾರಣರಾದ ಪೋಲಿಸ್ ಸಿಬ್ಬಂದಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ನಿರ್ದೇಶನ ಕೋರಿ ಅವರ ಕುಟುಂಬಗಳು ಸಲ್ಲಿಸಿರುವ ಮಧ್ಯಂತರ ಅರ್ಜಿಗೆ ಸಂಬಂಧಿಸಿದಂತೆ ಅಸ್ಸಾಂ ಸರಕಾರಕ್ಕೆ ನೋಟಿಸ್‌ನ್ನು ಉಚ್ಚ ನ್ಯಾಯಾಲಯವು ಹೊರಡಿಸಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಆ.30ರೊಳಗೆ ವಿವರವಾದ ಅಫಿಡವಿಟ್ ಸಲ್ಲಿಸುವುದಾಗಿ ರಾಜ್ಯದ ಮನವಿಯನ್ನು ಅಂಗೀಕರಿಸಿದ ಉಚ್ಚ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಸೆ.10ಕ್ಕೆ ನಿಗದಿಗೊಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News