ಅಸ್ಸಾಂ: ಗುಂಡಿನ ಕಾಳಗ ಮೂವರು ಶಂಕಿತ ಉಗ್ರರ ಸಾವು

Update: 2024-07-17 15:38 GMT

ಸಾಂದರ್ಭಿಕ ಚಿತ್ರ

ಸಿಲ್ಚಾರ್ : ಅಸ್ಸಾಂ-ಮಿರೆರಾಂ ಗಡಿಯ ಕಚಾರ್ ಸಮೀಪದ ಭುಬನ್ ಹಿಲ್ಸ್ ನಲ್ಲಿ ಬುಧವಾರ ನಡೆದ ಗುಂಡಿನ ಕಾಳಗದಲ್ಲಿ ಅಸ್ಸಾಂ ಪೊಲೀಸರು ಮೂವರು ಶಂಕಿತ ಉಗ್ರರನ್ನು ಹತ್ಯೆಗೈದಿದ್ದಾರೆ. ಈ ಗುಂಡಿನ ಕಾಳಗದಲ್ಲಿ ಮೂವರು ಪೊಲೀಸ್ ಅಧಿಕಾರಿಗಳು ಕೂಡ ಗಾಯಗೊಂಡಿದ್ದಾರೆ.

ಪೊಲೀಸ್ ಅಧೀಕ್ಷಕ ನೋಮಲ್ ಮಹತ್ತಾ ನೇತೃತ್ವದ ಕಚಾರ್ ಪೊಲೀಸರ ತಂಡ ದಲಾಯಿ ಗಂಗಾ ನಗರದಲ್ಲಿ ಬೆಳಗ್ಗೆ ಬಂಧಿಸಲಾದ ಹಮರ್ ಉಗ್ರ ಸಂಘಟನೆಯ ಮೂವರು ಶಂಕಿತ ಸದಸ್ಯರನ್ನು ಕರೆದುಕೊಂಡು ಭುಬನ್ ಹಿಲ್ಸ್ ಗೆ ಕಾರ್ಯಾಚರಣೆಗೆ ತೆರಳಿದ ಸಂದರ್ಭ ಈ ಗುಂಡಿನ ಕಾಳಗ ನಡೆದಿದೆ. ಈ ಮೂವರು ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದರು. ಪೊಲೀಸರು ಅವರನ್ನು ಬಂಧಿಸಿ ಆಟೋ ರಿಕ್ಷಾದಿಂದ ಒಂದು ಎ.ಕೆ. 47 ರೈಫಲ್, ಒಂದು ಪಿಸ್ತೂಲ್ ಹಾಗೂ ಇತರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದರು.

ಭುಬನ್ ಹಿಲ್ಸ್ಗೆ ತೆರಳಿದ ಸಂದರ್ಭ ಅಲ್ಲಿ ಅಡಗಿದ್ದ ಇತರ ಶಂಕಿದ ಉಗ್ರರು ಹೊಂಚು ದಾಳಿ ನಡೆಸಿದರು. ಅಧಿಕಾರಿಗಳ ಮೇಲೆ ಗುಂಡಿನ ದಾಳಿ ನಡೆಸಿದರು. ಪೊಲೀಸರು ಪ್ರತಿದಾಳಿ ನಡೆಸಿದರು. ಇದರಿಂದ ಒಂದು ಗಂಟೆಗಳ ಕಾಲ ಗುಂಡಿನ ಕಾಳಗ ನಡೆಯಿತು. ಈ ಗುಂಡಿನ ಕಾಳಗದಲ್ಲಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದ ಮೂವರು ಶಂಕಿತ ಉಗ್ರರು ಸಾವನ್ನಪಿದರು ಎಂದು ಅವರು ತಿಳಿಸಿದ್ದಾರೆ.

ಗಾಯಗೊಂಡ ಪೊಲೀಸರನ್ನು ಸಿಲ್ಚಾರ್ನ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ಘಟನೆ ಹಿನ್ನೆಲೆಯಲ್ಲಿ ಕಚಾರ್ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಭದ್ರತಾ ಪಡೆಗಳು ಈ ವಲಯದಲ್ಲಿರುವ ಇತರ ಶಂಕಿತ ಉಗ್ರರನ್ನು ಪತ್ತೆ ಹಚ್ಚಲು ಹಾಗೂ ನಿಗ್ರಹಿಸಲು ಶೋಧ ಕಾರ್ಯಾಚರಣೆ ಆರಂಬಿಸಿವೆ.

ಈ ಪ್ರದೇಶದಲ್ಲಿ ಶಾಂತಿ ಹಾಗೂ ಸ್ಥಿರತೆಯನ್ನು ಮರು ಸ್ಥಾಪಿಸಲು ಪೊಲೀಸರು ಬದ್ಧವಾಗಿದ್ದಾರೆ. ಹಿಂಸಾಚಾರವನ್ನು ತಡೆಯಲು ಅವರು ಕಠಿಣ ಪರಿಶ್ರಮದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮಹತ್ತಾ ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News