ಹಲ್ಲೆ ಪ್ರಕರಣ | ಬಿಜೆಪಿ ಶಾಸಕಿ, ಅವರ ಪತಿ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಕುಟುಂಬ ಸಮೇತ ಇಸ್ಲಾಂ ಧರ್ಮ ಸ್ವೀಕರಿಸುತ್ತೇವೆ: ಕಾಂಗ್ರೆಸ್ ದಲಿತ ಮುಖಂಡ

Update: 2024-07-12 15:20 GMT
PC : indianexpress.com

ಅಹ್ಮದಾಬಾದ್ : ಬಿಜೆಪಿ ಶಾಸಕಿ ಗೀತಾಬಾ ಜಡೇಜಾ ಅವರ ಪುತ್ರ ತನ್ನ ಪುತ್ರನ ಮೇಲೆ ಹಲ್ಲೆ ನಡೆಸಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ತಮ್ಮ ಇಡೀ ಕುಟುಂಬ, ಮತ್ತು ದಲಿತ ಸಮುದಾಯದ ಹಲವು ಮಂದಿ ಇಸ್ಲಾಂ ಧರ್ಮ ಸ್ವೀಕರಿಸಲಿದ್ದೇವೆ ಎಂದು ಕಾಂಗ್ರೆಸ್‌ನ ಜುನಾಗಢ್ ನಗರ ಎಸ್‌ಸಿ/ಎಸ್‌ಟಿ ಘಟಕದ ಅಧ್ಯಕ್ಷ ರಾಜೇಶ್ ಸೋಲಂಕಿ ಹೇಳಿದ್ದಾರೆ ಎಂದು indianexpress.com ವರದಿ ಮಾಡಿದೆ.

ಬಿಜೆಪಿ ಶಾಸಕಿ ಗೀತಾಬಾ ಜಡೇಜಾ ಅವರ ರಾಜೀನಾಮೆ ಪಡೆದು, ಅವರ ಪತಿಯನ್ನು ಬಂಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ರಾಜೇಶ್ ಸೋಲಂಕಿ ಅವರು ದಲಿತ ಸಮುದಾಯದ ಅನೌಪಚಾರಿಕ ಸಂಘಟನೆಯಾದ ಜುನಾಗಢ ಜಿಲ್ಲಾ ಅನುಶುಚಿತ್ ಜಾತಿ ಸಮಾಜದ ಮುಖ್ಯಸ್ಥರೂ ಆಗಿದ್ದಾರೆ. ಅವರ ಮಗ ಸಂಜಯ್ ಸೋಲಂಕಿ ಅವರು ಕಾಂಗ್ರೆಸ್‌ನ ವಿದ್ಯಾರ್ಥಿ ವಿಭಾಗ - ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (NSUI) ನ ನಾಯಕರಾಗಿದ್ದಾರೆ.

ಸಂಜಯ್ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಗೊಂಡಾಲ್ ಬಿಜೆಪಿ ಶಾಸಕಿ ಗೀತಾಬಾ ಜಡೇಜಾ ಅವರ ಪುತ್ರ ಜ್ಯೋತಿರಾದಿತ್ಯಸಿಂಹ ಅಲಿಯಾಸ್ ಗಣೇಶ್ ಅವರನ್ನು ಬಂಧಿಸಲಾಗಿದೆ.

ಬುಧವಾರ, ರಾಜೇಶ್ ಸೋಲಂಕಿ ಅವರು ಜುನಾಗಢ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಇಸ್ಲಾಂ ಧರ್ಮ ಸ್ವೀಕರಿಸಲು ರಾಜ್ಯ ಸರಕಾರದ ಅನುಮತಿ ಪಡೆಯಲು ಅರ್ಜಿ ನಮೂನೆಗಳನ್ನು ಸಂಗ್ರಹಿಸಿದ್ದಾರೆ ಎನ್ನಲಾಗಿದೆ. ಗೀತಾಬಾ ಮತ್ತು ಆಕೆಯ ಪತಿ ಜಯರಾಜ್‌ಸಿನ್ಹಾ ಜಡೇಜಾ ವಿರುದ್ಧ ಬಿಜೆಪಿ ಸರಕಾರ ಕ್ರಮ ಕೈಗೊಳ್ಳದಿದ್ದರೆ ತಾನು ಮತ್ತು ಸೋಲಂಕಿ ಕುಟುಂಬದ ಸುಮಾರು 150 ಸದಸ್ಯರು ಇಸ್ಲಾಂ ಧರ್ಮ ಸ್ವೀಕರಿಸುವುದಾಗಿ ಜುಲೈ 6 ರಂದು ಮಾಧ್ಯಮಗಳಿಗೆ ರಾಜೇಶ್ ಸೋಲಂಕಿ ಹೇಳಿಕೆ ನೀಡಿದ್ದರು.

ಶಾಸಕಿಯ ಪುತ್ರ ಜ್ಯೋತಿರಾಧ್ಯ ಸಿಂಹ ಅವರ ಡ್ರೈವಿಂಗ್ ವಿಚಾರದಲ್ಲಿ ಸಂಜಯ್ ವಾಗ್ವಾದ ಮಾಡಿದ್ದ ಬಳಿಕ, ಸಂಜಯ್ ಅವರನ್ನು ಶಾಸಕಿಯ ಪುತ್ರ ಮತ್ತು ಸಹಚರರು ಮೇ. 31ರಂದು ಅಪಹರಿಸಿದ್ದರು ಎನ್ನಲಾಗಿದೆ.

ಆರೋಪಿಗಳು ತನ್ನನ್ನು ರಾಜ್‌ಕೋಟ್ ಜಿಲ್ಲೆಯ ಗೊಂಡಾಲ್‌ಗೆ ಕರೆದೊಯ್ದು ಪಿಸ್ತೂಲ್ ತೋರಿಸಿ ಬೆದರಿಸಿ ವಿವಸ್ತ್ರಗೊಳಿಸಿ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ ಕ್ಷಮೆ ಕೇಳುವಂತೆ ಒತ್ತಾಯಿಸಿದ್ದಾರೆ ಎಂದು ಸಂಜಯ್ ದೂರಿನಲ್ಲಿ ಆರೋಪಿಸಿದ್ದಾರೆ.

ಪೊಲೀಸರು ಜ್ಯೋತಿರಾದ್ಯ ಸಿಂಹ ಮತ್ತು ಇತರ 10 ಜನರನ್ನು ಕೊಲೆ ಯತ್ನದ ಆರೋಪದ ಮೇಲೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಬಂಧಿಸಿದ್ದಾರೆ. ಎಲ್ಲಾ ಆರೋಪಿಗಳು ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ಆದರೆ, ಜ್ಯೋತಿರಾದಿತ್ಯಸಿಂಹನ ತಂದೆ, ಮೂರು ಬಾರಿ ಗೊಂಡಾಲ್‌ನ ಮಾಜಿ ಶಾಸಕ ಜಯರಾಜ್‌ಸಿಂಹ ಕೂಡ ಸಂಜಯ್‌ನನ್ನು ಅಪಹರಿಸಿ ಹಲ್ಲೆ ನಡೆಸುವ ಸಂಚಿನ ಭಾಗವಾಗಿದ್ದರು ಎಂದು ಸಂಜಯ್ ತಂದೆ ರಾಜೇಶ್ ಆರೋಪಿಸಿದ್ದಾರೆ.

ಹಾಲಿ ಶಾಸಕಿ ಮತ್ತು ಮಾಜಿ ಶಾಸಕನ ಮಗ, ನನ್ನ ಮಗನನ್ನು ಅಪಹರಿಸಿದ್ದಾರೆ. ಕಳೆದ 25 ವರ್ಷಗಳಿಂದ ಬಿಜೆಪಿ ಗುಜರಾತ್‌ನಲ್ಲಿ ಆಡಳಿತ ನಡೆಸುತ್ತಿದ್ದು, ಈ ಅವಧಿಯಲ್ಲಿ ದಲಿತರ ಮೇಲೆ ಕನಿಷ್ಠ 5,000 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಉನಾ ದೌರ್ಜನ್ಯದ ಸಂತ್ರಸ್ತರಿಗೆ ಎಂಟು ವರ್ಷ ಕಳೆದರೂ ನ್ಯಾಯ ಸಿಕ್ಕಿಲ್ಲ. ನಾಗರಿಕರನ್ನು ರಕ್ಷಿಸುವುದು ಗುಜರಾತ್ ಸರಕಾರದ ಕರ್ತವ್ಯ. ಎಂದು ರಾಜೇಶ್ ಬುಧವಾರ ಜಿಲ್ಲಾಧಿಕಾರಿ ಕಚೇರಿಯ ಹೊರಗೆ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

“ಈ ಬಗ್ಗೆ ಕ್ರಮ ಕೈಗೊಳ್ಳಲು ಆಗಸ್ಟ್ 15 ರವರೆಗೆ ರಾಜ್ಯ ಸರಕಾರ ಮತ್ತು ಬಿಜೆಪಿಗೆ ಸಮಯ ನೀಡಿದ್ದೇನೆ. ಸರಕಾರ ಮತ್ತು ಬಿಜೆಪಿ ನಮ್ಮ ಮಾತುಗಳನ್ನು ಕೇಳದಿದ್ದರೆ ಮತ್ತು ನಮ್ಮ ಬೇಡಿಕೆಗಳನ್ನು ಒಪ್ಪದಿದ್ದರೆ, ನಾವು ಗಾಂಧಿನಗರಕ್ಕೆ ಬೃಹತ್ ರ್ಯಾ ಲಿ ನಡೆಸುತ್ತೇವೆ. ದಲಿತರಿಗೆ ನ್ಯಾಯ ಕೊಡಿಸುವಂತೆ ಮುಖ್ಯಮಂತ್ರಿ, ರಾಜ್ಯಪಾಲರು ಮತ್ತು ಬಿಜೆಪಿ ಅಧ್ಯಕ್ಷರಿಗೆ ಮನವಿ ಮಾಡುತ್ತೇವೆ. ಆ ನಂತರವೂ ಸರಕಾರ ಕ್ರಮ ಕೈಗೊಳ್ಳದಿದ್ದರೆ ನಾವು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುತ್ತೇವೆ” ಎಂದು ಅವರು ಹೇಳಿದ್ದಾರೆ.

ರಾಜೇಶ್ ಸೋಲಂಕಿಯವರ ರಾಜಕೀಯ ಜೀವನವು ಬಿಜೆಪಿಯಿಂದಲೇ ಪ್ರಾರಂಭವಾಯಿತು. ಅವರು 2004 ರಲ್ಲಿ ಬಿಜೆಪಿಯಿಂದ ಜುನಾಗಢ್ ಮುನ್ಸಿಪಲ್ ಕಾರ್ಪೊರೇಶನ್‌ಗೆ ಆಯ್ಕೆಯಾದರು. 2009 ರಲ್ಲಿ ಅವರು ಕಾಂಗ್ರೆಸ್‌ ಸೇರಿದರು. ಅದೇ ವರ್ಷ ಮತ್ತು 2014 ರಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆದ್ದರು. 2019 ರಲ್ಲಿ ಸೋತರು.

ಜುನಾಗಢ್‌ನ ನಿವಾಸಿ ಹೆಚ್ಚುವರಿ ಜಿಲ್ಲಾಧಿಕಾರಿ ಎನ್ ಎಫ್ ಚೌಧರಿ, ರಾಜೇಶ್ ಸೋಲಂಖಿ ಮತಾಂತರಕ್ಕಾಗಿ ಅರ್ಜಿ ನಮೂನೆಗಳನ್ನು ಸಂಗ್ರಹಿಸಿರುವುದನ್ನು ಖಚಿತಪಡಿಸಿದ್ದಾರೆ. "ಅವರಿಂದ ಯಾವುದೇ ಭರ್ತಿ ಮಾಡಿದ ಫಾರ್ಮ್‌ಗಳನ್ನು ಇನ್ನೂ ಸ್ವೀಕರಿಸಿಲ್ಲ" ಎಂದು ಅವರು ಹೇಳಿದ್ದಾರೆ.

ಗುಜರಾತಿನ ಧಾರ್ಮಿಕ ಸ್ವಾತಂತ್ರ್ಯ ಕಾಯಿದೆಯ ಪ್ರಕಾರ ಯಾವುದೇ ವ್ಯಕ್ತಿ ಬಲವಂತದಿಂದ ಮತಾಂತರಕ್ಕೆ ಪ್ರಯತ್ನಿಸುತ್ತಿದ್ದರೆ ಅಥವಾ ಯಾರಾದರೂ ವ್ಯಕ್ತಿಯನ್ನು ಮತಾಂತರಕ್ಕೆ ಆಮಿಷವೊಡ್ಡುತ್ತಿದ್ದರೆ ಅದನ್ನು ಖಚಿತಪಡಿಸಿಕೊಳ್ಳುವ ಅಧಿಕಾರ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಇದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎನ್ ಎಫ್ ಚೌಧರಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News