ಅಯೋಧ್ಯೆ ರಾಮಮಂದಿರ ಉದ್ಘಾಟನೆ: ಸಂವಿಧಾನ ಪೀಠಿಕೆಯನ್ನು ಹಂಚಿಕೊಂಡ ನಟಿ ಸುಶ್ಮಿತಾ ಸೇನ್
ಹೊಸದಿಲ್ಲಿ: ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ವಿಧಿ ವಿಧಾನಗಳ ನೇತೃತ್ವವನ್ನು ಪ್ರಧಾನಿ ನರೇಂದ್ರ ಮೋದಿ ವಹಿಸಿದ್ದ ದಿನ ಭಾರತದಾದ್ಯಂತ ಇರುವ ಕೆಲವು ಚಿತ್ರರಂಗದ ಗಣ್ಯರು ಸಾಮಾಜಿಕ ಮಾಧ್ಯಮಗಳಲ್ಲಿ ಸಂವಿಧಾನದ ಪೀಠಿಕೆಯನ್ನು ಹಂಚಿಕೊಂಡಿದ್ದಾರೆ. ಇದನ್ನು ಸರ್ಕಾರಿ ಪ್ರಾಯೋಜಿತ ಸಂಭ್ರಮಾಚರಣೆಯ ಟೀಕೆ ಎಂದೇ ಪರಿಗಣಿಸಲಾಗಿದ್ದು, ಇಂತಹ ನಡೆ ದೇಶದ ಜಾತ್ಯತೀತ ಮೌಲ್ಯಗಳಿಗೆ ವಿರುದ್ಧವಿದೆ ಎಂದು ಪ್ರತಿಪಾದಿಸಲಾಗಿದೆ ಎಂದು indianexpress.com ವರದಿ ಮಾಡಿದೆ.
#Motherland ಎಂಬ ಹ್ಯಾಶ್ ಟ್ಯಾಗ್ ಬಳಸಿ ಅತುಲ್ ಮೊಂಗಿಯಾ ಅವರ ಸಂವಿಧಾನದ ಪೀಠಿಕೆ ಚಿತ್ರ ಹೊಂದಿರುವ ಇನ್ಸ್ಟಾಗ್ರಾಮ್ ಪೋಸ್ಟ್ ಅನ್ನು ಮರು ಪೋಸ್ಟ್ ಮಾಡಿರುವ ಸುಶ್ಮಿತಾ ಸೇನ್, ಜಾತ್ಯತೀತತೆಯನ್ನು ಬೆಂಬಲಿಸುತ್ತಿರುವ ಧ್ವನಿಗಳ ಜೊತೆಗೂಡಿದ್ದಾರೆ.
ಸುಶ್ಮಿತಾ ಸೇನ್ ಅವರೊಂದಿಗೆ ಮಲಯಾಳಂ ಚಿತ್ರರಂಗದ ಗಣ್ಯ ವ್ಯಕ್ತಿಗಳಾದ ಪಾರ್ವತಿ ತಿರುವೊತು, ರೀಮಾ ಕಲ್ಲಿಂಗಲ್, ದಿವ್ಯ ಪ್ರಭಾ, ರಾಜೇಶ್ ಮಾಧವನ್, ಕನಿ ಕುಸ್ರುತಿ, ನಿರ್ದೇಶಕರಾದ ಜೋ ಬೇಬಿ, ಆಶಿಕ್ ಅಬು, ಕಮಲ್ ಕೆ.ಎಂ., ಕುನಿಲ ಮಾಸಿಲ್ಲಮಣಿ ಹಾಗೂ ಗಾಯಕ ಸೂರಜ್ ಸಂತೋಷ್ ಕೂಡಾ ಸಂವಿಧಾನ ಪೀಠಿಕೆಯ ಚಿತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಈ ತಾರೆಗಳು ತಮ್ಮ ಅಭಿಮಾನಿಗಳಿಂದ ಬೆಂಬಲ ಪಡೆದರೂ, ಹಲವರು ಅವರ ಪೋಸ್ಟ್ ಗಳಿಗೆ ಜೈ ಶ್ರೀರಾಮ್ ಎಂಬ ಪ್ರತಿಕ್ರಿಯೆಯನ್ನು ನೀಡುವ ಮೂಲಕ ಟ್ರೋಲ್ ಕೂಡಾ ಮಾಡಿದ್ದಾರೆ.