ಬಾಬಾ ಸಿದ್ದೀಕ್ ಮೃತಪಟ್ಟಿದ್ದನ್ನು ಖಚಿತಪಡಿಸಿಕೊಳ್ಳಲು ಆಸ್ಪತ್ರೆಯೆದುರು ಕಾದು ಕುಳಿತಿದ್ದ ಹಂತಕ!
ಮುಂಬೈ: ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ಎನ್‌ಸಿಪಿ ನಾಯಕ ಬಾಬಾ ಸಿದ್ದೀಕಿ ಮೇಲೆ ಗುಂಡು ಹಾರಿಸಿದ ಬಳಿಕ ಅವರು ಮೃತಪಟ್ಟಿದ್ದನ್ನು ಖಚಿತಪಡಿಸಿಕೊಳ್ಳಲು ಆಸ್ಪತ್ರೆಯ ಹೊರಗಡೆ 30 ನಿಮಿಷಗಳ ಕಾಲ ಕಾಯುತ್ತಿದ್ದೆ ಎಂದು ಹತ್ಯೆಯ ಪ್ರಮುಖ ಆರೋಪಿ ಶಿವ ಕುಮಾರ್ ಗೌತಮ್ ವಿಚಾರಣೆ ವೇಳೆ ಪೊಲೀಸರ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ ಎಂದು ವರದಿಯಾಗಿದೆ.
ಶಿವ ಕುಮಾರ್‌ನನ್ನು ಕಳೆದ ವಾರ ಪೊಲೀಸರು ಉತ್ತರ ಪ್ರದೇಶದಲ್ಲಿ ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಹತ್ಯೆಯ ಬಗ್ಗೆ ವಿವರಿಸಿರುವ ಆರೋಪಿ, ‘ಗುಂಡು ಹಾರಿಸಿದ ಬಳಿಕ ಅವರ ಸಾವಿನ ಬಗ್ಗೆ ದೃಢಪಡಿಸಿಕೊಳ್ಳಲು ಬಟ್ಟೆ ಬದಲಿಸಿಕೊಂಡು ಸಿದ್ದೀಕಿಯವರನ್ನು ದಾಖಲಿಸಿದ್ದ ಲೀಲಾವತಿ ಆಸ್ಪತ್ರೆಯ ಎದುರು 30 ನಿಮಿಷಗಳ ಕಾಲ ಕಾದು ಕುಳಿತಿದ್ದೆ. ಸಿದ್ದೀಕಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನುವುದು ತಿಳಿಯುತ್ತಿದ್ದಂತೆ ಅಲ್ಲಿಂದ ತೆರಳಿದ್ದೆ’ ಎಂದು ಹೇಳಿದ್ದಾನೆ.
ಲೀಲಾವತಿ ಆಸ್ಪತ್ರೆಯಲ್ಲಿ ಸಿದ್ದೀಕ್ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಯುತ್ತಲೇ ಆರೋಪಿ ಶಿವಕುಮಾರ್ ಕುರ್ಲಾ ರೈಲು ನಿಲ್ದಾಣಕ್ಕೆ ಆಟೋದಲ್ಲಿ ಹೊರಟಿದ್ದಾನೆ. ಕುರ್ಲಾದಿಂದ ಥಾಣೆಗೆ ಹೋಗಿ ಅಲ್ಲಿಂದ ಪುಣೆಗೆ ಪ್ರಯಾಣ ಬೆಳೆಸಿದ್ದಾನೆ. ಬಳಿಕ ಕೆಲವು ಗಂಟೆಗಳ ಕಾಲ ಕಾದು ಉತ್ತರ ಪ್ರದೇಶಕ್ಕೆ ರೈಲು ಹತ್ತಿದ್ದಾನೆ. ಸಾಕ್ಷ್ಯ ಸಿಗದಿರಲು ಕೂಡಲೇ ತನ್ನ ಫೋನ್ ನಾಶ ಪಡಿಸಿದ ಆರೋಪಿಯು ಲಕ್ನೋದಲ್ಲಿ ಹೊಸ ಫೋನ್ ಖರೀದಿಸಿದ ಎನ್ನಲಾಗಿದೆ.
ಮುಂಬೈನ ಬಾಂದ್ರಾದಲ್ಲಿ ಅ.12ರಂದು ರಾತ್ರಿ ಬಾಬಾ ಸಿದ್ದೀಕಿ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು.
ನವೆಂಬರ್ 10 ರಂದು, ಮುಂಬೈ ಕ್ರೈಂ ಬ್ರಾಂಚ್ ಮತ್ತು ಉತ್ತರ ಪ್ರದೇಶ ವಿಶೇಷ ಪೊಲೀಸರು ಬಹ್ರೈಚ್ ಜಿಲ್ಲೆಯ ನನ್ಪಾರಾದಿಂದ ಶಿವಕುಮಾರ್ ನನ್ನು ಬಂಧಿಸಿತು. ಆತ ನೇಪಾಳಕ್ಕೆ ಪಲಾಯನ ಮಾಡಲು ತಯಾರಿ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.