ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯ ಎನ್‌ಕೌಂಟರ್ | ಗುಂಡು ಹಾರಿಸಿದ ಪೊಲೀಸ್ ‘ಎನ್‌ಕೌಂಟರ್ ಸ್ಪೆಶಲಿಸ್ಟ್’ ಜೊತೆ ಕೆಲಸ ಮಾಡಿದ್ದರು

Update: 2024-09-24 16:00 GMT

PC: ANI 

ಮುಂಬೈ: ಮಹಾರಾಷ್ಟ್ರದ ಬದ್ಲಾಪುರ ಪಟ್ಟಣದ ನರ್ಸರಿ ಶಾಲೆಯೊಂದರ ಇಬ್ಬರು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿದ್ದ ಅದೇ ಶಾಲೆಯ ಸ್ವಚ್ಛತಾ ಕೆಲಸಗಾರ ಅಕ್ಷಯ್ ಶಿಂದೆಯನ್ನು ಗುಂಡು ಹಾರಿಸಿ ಕೊಂದಿರುವ ಪೊಲೀಸ್ ಇನ್ಸ್‌ಪೆಕ್ಟರ್ ಸಂಜಯ್ ಶಿಂದೆ ಮಾಜಿ ‘ಎನ್‌ಕೌಂಟರ್ ಸ್ಪೆಶಲಿಸ್ಟ್’ ಪ್ರದೀಪ್ ಶರ್ಮರೊಂದಿಗೆ ಕೆಲಸ ಮಾಡಿದ್ದರು ಎನ್ನಲಾಗಿದೆ.

ಶಾಲೆಯ ಶೌಚಾಲಯದಲ್ಲಿ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿದ್ದ 24 ವರ್ಷದ ಅಕ್ಷಯ್ ಶಿಂದೆಯನ್ನು, ಘಟನೆ ನಡೆದ ಐದು ದಿನಗಳ ಬಳಿಕ, ಅಂದರೆ ಆಗಸ್ಟ್ 17ರಂದು ಬಂಧಿಸಲಾಗಿತ್ತು.

ಆತನನ್ನು ಸೋಮವಾರ ಸಂಜೆ ಥಾಣೆಯ ಮುಂಬ್ರಾ ಬೈಪಾಸ್‌ನ ಸಮೀಪ ಎನ್‌ಕೌಂಟರ್‌ನಲ್ಲಿ ಕೊಲ್ಲಲಾಗಿತ್ತು. ಆತನ ವಿರುದ್ಧ ಮಾಜಿ ಪತ್ನಿ ಸಲ್ಲಿಸಿದ ದೂರಿನಂತೆ, ಆತನನ್ನು ವಿಚಾರಣೆಗಾಗಿ ಪೊಲೀಸ್ ವಾಹನವೊಂದರಲ್ಲಿ ಕರೆದೊಯ್ಯುತ್ತಿದ್ದಾಗ ಎನ್‌ಕೌಂಟರ್ ಸಂಭವಿಸಿದೆ. ವಾಹನ ಚಲಿಸುತ್ತಿದ್ದಾಗ ಆರೋಪಿಯು ತನ್ನೊಂದಿಗಿದ್ದ ಪೊಲೀಸ್ ಸಿಬ್ಬಂದಿಯೊಬ್ಬರ ಬಂದೂಕನ್ನು ಕಸಿದುಕೊಂಡು ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರ ಮೇಲೆ ಗುಂಡು ಹಾರಿಸಿ ಗಾಯಗೊಳಿಸಿದ ಎಂದು ಪೊಲೀಸರು ಹೇಳಿದ್ದಾರೆ.

ಆಗ ಬೆಂಗಾವಲು ಪೊಲೀಸ್ ವಾಹನದಲ್ಲಿದ್ದ ಸಂಜಯ್ ಶಿಂದೆ ಆರೋಪಿಯ ಮೇಲೆ ಗುಂಡು ಹಾರಿಸಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಬಳಿಕ ತಿಳಿಸಿದ್ದಾರೆ. ಬಳಿಕ, ಆರೋಪಿಯು ಮೃತಪಟ್ಟಿರುವುದಾಗಿ ಕಲ್ವ ಸರಕಾರಿ ಆಸ್ಪತ್ರೆಯ ವೈದ್ಯರು ಘೋಷಿಸಿದರು.

‘‘ಗುಂಡಿನ ದಾಳಿಯಲ್ಲಿ ಸಂಜಯ್ ಶಿಂದೆ ಮತ್ತು ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ನೀಲೇಶ್ ಮೋರೆ ಗಾಯಗೊಂಡಿದ್ದಾರೆ’’ ಎಂದು ಪೊಲೀಸರು ಹೇಳಿದ್ದಾರೆ.

ಸಂಜಯ್ ಶಿಂದೆ ಹಿಂದೆ, ಪ್ರದೀಪ್ ಶರ್ಮ ನೇತೃತ್ವದ ಥಾಣೆ ಪೊಲೀಸ್ ಕ್ರೈಮ್ ಬ್ರಾಂಚ್‌ನ ಸುಲಿಗೆ ನಿಗ್ರಹ ಘಟಕದಲ್ಲಿ ಕೆಲಸ ಮಾಡಿದ್ದರು. ಭೂಗತ ಪಾತಕಿ ದಾವೂದ್ ಇಬ್ರಾಹೀಮ್‌ನ ಸಹೋದರ ಇಕ್ಬಾಲ್ ಕಸ್ಕರ್‌ನನ್ನು ಬಂಧಿಸಿದ ತಂಡದಲ್ಲಿ ಶಿಂದೆ ಇದ್ದರು.

ಪ್ರದೀಪ್ ಶರ್ಮ 1990ರ ದಶಕದಲ್ಲಿ ಮುಂಬೈ ಪೊಲೀಸರ ‘ಎನ್‌ಕೌಂಟರ್ ಸ್ಪೆಶಲಿಸ್ಟ್’ ಎಂಬ ಖ್ಯಾತಿಯನ್ನು ಹೊಂದಿದ್ದರು. ಅವರು ತನ್ನ ವೃತ್ತಿ ಜೀವನದಲ್ಲಿ 100ಕ್ಕೂ ಅಧಿಕ ಕ್ರಿಮಿನಲ್‌ಗಳನ್ನು ಎನ್‌ಕೌಂಟರ್‌ನಲ್ಲಿ ಮುಗಿಸಿದ್ದಾರೆ ಎಂದು ಹೇಳಲಾಗಿದೆ. ಮುಖ್ಯವಾಗಿ ಅವರು ಮುಂಬೈ ಪಾತಕ ಲೋಕದಲ್ಲಿ ದಾವೂದ್ ಇಬ್ರಾಹೀಮ್ ಮತ್ತು ಛೋಟಾ ರಾಜನ್ ಗ್ಯಾಂಗ್‌ಗಳಿಗೆ ಸೇರಿದ ಗ್ಯಾಂಗ್‌ಸ್ಟರ್‌ಗಳನ್ನು ನಿಯಂತ್ರಿಸಿದ್ದರು.

ಆದರೆ, 2006ರಲ್ಲಿ ನಡೆದ ಛೋಟಾ ರಾಜನ್‌ನ ಮಾಜಿ ಸಂಗಡಿಗ ಲಖನ್ ಭಯ್ಯನ ನಕಲಿ ಎನ್‌ಕೌಂಟರ್‌ನಲ್ಲಿ ವಹಿಸಿದ ಪಾತ್ರಕ್ಕಾಗಿ ಅವರು ಈಗ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.

ಸಂಜಯ್ ಶಿಂದೆ ಈಗ ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಗಾಗಿ ಮಹಾರಾಷ್ಟ್ರ ಸರಕಾರ ಸ್ಥಾಪಿಸಿದ ವಿಶೇಷ ತನಿಖಾ ತಂಡದ ಭಾಗವಾಗಿದ್ದಾರೆ.

► ಹೆತ್ತವರಿಂದ ತನಿಖೆಗೆ ಆಗ್ರಹ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಅಕ್ಷಯ್ ಶಿಂದೆಯ ಸಾವಿನ ಬಗ್ಗೆ ಮಹಾರಾಷ್ಟ್ರದ ಅಪರಾಧ ತನಿಖಾ ಇಲಾಖೆ (ಸಿಐಡಿ) ತನಿಖೆ ನಡೆಸಲಿದೆ. ಇದು ಪೊಲೀಸ್ ಕಸ್ಟಡಿಯಲ್ಲಿ ಸಂಭವಿಸಿದ ಸಾವು ಆಗಿರುವುದರಿಂದ ಮಹಾರಾಷ್ಟ್ರ ಸಿಐಡಿಯು ತನಿಖೆ ನಡೆಸಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ಹೇಳಿದ್ದಾರೆ.

ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಮುಚ್ಚಿದ ಕೋಣೆಯೊಳಗೆ ಪರಿಣತ ವೈದ್ಯರ ಸಮ್ಮುಖದಲ್ಲಿ ನಡೆಸಲಾಗುತ್ತದೆ.

ಸಿಐಡಿ ಅಧಿಕಾರಿಗಳು ಅಕ್ಷಯ್ ಶಿಂದೆಯ ಹೆತ್ತವರ ಹೇಳಿಕೆಗಳನ್ನು ಪಡೆಯಲಿದ್ದಾರೆ. ತನ್ನ ಮಗನ ಸಾವಿನ ಬಗ್ಗೆ ತನಿಖೆ ಆಗಬೇಕೆಂದು ಅಕ್ಷಯ್ ಶಿಂದೆಯ ತಂದೆ ಅನ್ನ ಶಿಂದೆ ಒತ್ತಾಯಿಸಿದ್ದಾರೆ.

ಅಕ್ಷಯ್ ಮೊದಲು ಪೊಲೀಸರತ್ತ ಗುಂಡು ಹಾರಿಸಿದ ಮತ್ತು ಬಳಿಕ, ಪೊಲೀಸರು ಸ್ವರಕ್ಷಣೆಗಾಗಿ ಅವನ ಮೇಲೆ ಗುಂಡು ಹಾರಿಸಿದರು ಎಂಬ ಪೊಲೀಸರ ಹೇಳಿಕೆಯನ್ನು ಅವನ ಕುಟುಂಬ ಸದಸ್ಯರು ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News