ಗುಜರಾತ್ | ಅತ್ಯಾಚಾರಕ್ಕೆ ಪ್ರತಿರೋಧ, 6ರ ಬಾಲಕಿಯ ಕೊಂದು ಶಾಲಾವರಣದಲ್ಲಿ ಎಸೆದಿದ್ದ ಪ್ರಾಂಶುಪಾಲನ ಬಂಧನ

Update: 2024-09-24 15:39 GMT

ಸಾಂದರ್ಭಿಕ ಚಿತ್ರ

ಅಹ್ಮದಾಬಾದ್ : ಗುಜರಾತಿನ ದಾಹೋಡ್ ಜಿಲ್ಲೆಯಲ್ಲಿ ಆರರ ಹರೆಯದ ಬಾಲಕಿಯ ಸಾವಿನ ಕುರಿತು ತನಿಖೆಯು ಹೇಯ ಕೃತ್ಯವನ್ನು ಬಹಿರಂಗಗೊಳಿಸಿದೆ. ಒಂದನೇ ತರಗತಿಯ ವಿದ್ಯಾರ್ಥಿನಿಯು ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನವನ್ನು ಪ್ರತಿರೋಧಿಸಿದ ಬಳಿಕ ಶಾಲಾ ಪ್ರಾಂಶುಪಾಲ ಆಕೆಯನ್ನು ಉಸಿರುಗಟ್ಟಿಸಿ ಕೊಂದಿದ್ದ,ಶವವನ್ನು ಶಾಲೆಯ ಆವರಣದಲ್ಲಿ ಹಾಗೂ ಆಕೆಯ ಬ್ಯಾಗ್ ಮತ್ತು ಶೂಗಳನ್ನು ತರಗತಿ ಕೋಣೆಯ ಬಳಿ ಎಸೆದಿದ್ದ. ಆರೋಪಿ ಗೋವಿಂದ ನಟ್ (50) ಎಂಬಾತನನ್ನು ಪೋಲಿಸರು ಬಂಧಿಸಿದ್ದಾರೆ.

ಬಾಲಕಿಯ ಶವ ಗುರುವಾರ ಸಂಜೆ ಶಾಲೆಯ ಆವರಣದಲ್ಲಿ ಪತ್ತೆಯಾಗಿದ್ದು, ಪ್ರದೇಶದಲ್ಲಿ ಆತಂಕ ಸೃಷ್ಟಿಯಾಗಿತ್ತು. ಆಕೆಯನ್ನು ಉಸಿರುಗಟ್ಟಿಸಿ ಕೊಂದಿದ್ದು ಮರಣೋತ್ತರ ಪರೀಕ್ಷೆಯಿಂದ ತಿಳಿದು ಬಂದಿತ್ತು. ಪ್ರಕರಣವನ್ನು ದಾಖಲಿಸಿಕೊಂಡಿದ್ದ ಪೋಲಿಸರು ತನಿಖೆಗಾಗಿ 10 ತಂಡಗಳನ್ನು ರಚಿಸಿದ್ದರು.

ತನ್ನ ಮಗಳು ಪ್ರತಿದಿನ ನಟ್ ಜೊತೆ ಶಾಲೆಗೆ ಹೋಗುತ್ತಿದ್ದಳು ಎಂದು ಬಾಲಕಿಯ ತಾಯಿ ಪೋಲಿಸರಿಗೆ ತಿಳಿಸಿದ್ದರು. ಪೋಲಿಸರು ವಿಚಾರಿಸಿದಾಗ ತಾನು ಬಾಲಕಿಯನ್ನು ಶಾಲೆಯ ಬಳಿ ಬಿಟ್ಟು ಬೇರೊಂದು ಕೆಲಸದ ನಿಮಿತ್ತ ತೆರಳಿದ್ದೆ ಎಂದು ನಟ್ ಹೇಳಿಕೊಂಡಿದ್ದ.

ನಟ್ ಉತ್ತರದಿಂದ ತೃಪ್ತರಾಗದ ಪೊಲೀಸರು ಘಟನೆಯ ದಿನದ ನಟ್‌ನ ಫೋನ್ ಲೊಕೇಷನ್ ವಿವರಗಳನ್ನು ಪರಿಶೀಲಿಸಿದಾಗ ಆತ ಅಂದು ತಡವಾಗಿ ಶಾಲೆಯನ್ನು ತಲುಪಿದ್ದ ಎನ್ನುವುದು ಬೆಳಕಿಗೆ ಬಂದಿತ್ತು. ತೀವ್ರ ವಿಚಾಣೆ ನಡೆಸಿದಾಗ ನಟ್ ತಾನು ಘೋರ ಕೃತ್ಯವನ್ನು ಎಸಗಿದ್ದನ್ನು ಒಪ್ಪಿಕೊಂಡಿದ್ದ.

ನಟ್ ಬೆಳಿಗ್ಗೆ 10:20ರ ಸುಮಾರಿಗೆ ಬಾಲಕಿಯನ್ನು ಆಕೆಯ ಮನೆಯಿಂದ ಕರೆದೊಯ್ದಿದ್ದ. ಆತನ ಕಾರು ಹತ್ತಲು ಮಗಳಿಗೆ ನೆರವಾಗಿದ್ದ ತಾಯಿ ಆಕೆಯನ್ನು ಬೀಳ್ಕೊಟ್ಟಿದ್ದಳು. ಆದರೆ ಬಾಲಕಿ ಶಾಲೆಯನ್ನು ತಲುಪಿಯೇ ಇರಲಿಲ್ಲ. ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಈ ವಿಷಯವನ್ನು ದೃಢಪಡಿಸಿದ್ದಾರೆ. ಶಾಲೆಗೆ ತೆರಳುವ ಮಾರ್ಗದಲ್ಲಿ ನಟ್ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಲು ಪ್ರಯತ್ನಿಸಿದ್ದ. ಬಾಲಕಿ ಕೂಗಲು ಆರಂಭಿಸಿದಾಗ ಆತ ಅದನ್ನು ನಿಲ್ಲಿಸಲು ಆಕೆಯ ಮುಖವನ್ನು ಒತ್ತಿ ಹಿಡಿದು ಉಸಿರುಗಟ್ಟಿಸಿದ್ದ.

ಶಾಲೆಯನ್ನು ತಲುಪಿದ ಬಳಿಕ ಆತ ಬಾಲಕಿಯ ಶವವನ್ನು ಕಾರಿನಲ್ಲಿಯೇ ಬಿಟ್ಟು ಅದನ್ನು ಲಾಕ್ ಮಾಡಿ ತೆರಳಿದ್ದ. ಸಂಜೆ ಐದು ಗಂಟೆಯ ಸುಮಾರಿಗೆ ಶವವನ್ನು ಶಾಲಾ ಕಟ್ಟಡದ ಹಿಂದೆ ಎಸೆದಿದ್ದ ಮತ್ತು ಬ್ಯಾಗ್ ಹಾಗೂ ಶೂಗಳನ್ನು ತರಗತಿ ಕೋಣೆಯ ಹೊರಗಿರಿಸಿದ್ದ. ಆತ ಆರಂಭದಲ್ಲಿ ನಿರಾಕರಿಸಿದ್ದ, ಆದರೆ ತಾಂತ್ರಿಕ ವಿಶ್ಲೇಷಣೆಯ ಬಳಿಕ ನಾವು ಆತನ ಬಗ್ಗೆಯೇ ಶಂಕೆಗೊಂಡಿದ್ದೆವು ಎಂದು ಪೋಲಿಸರು ತಿಳಿಸಿದರು.

ಶಾಲಾ ಶಿಕ್ಷಣ ಸಚಿವ ಕುಬೇರ ದಿಂಡೋರ್ ಈ ಘಟನೆಯನ್ನು ಖಂಡಿಸಿದ್ದು,ಇದು ಸಮಾಜವು ತಲೆ ತಗ್ಗಿಸುವಂತೆ ಮಾಡಿದೆ ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News