ಮಾನವೀಯತೆಯ ಯಶಸ್ಸು ಯುದ್ಧಭೂಮಿಯಲ್ಲಿಲ್ಲ : ಪ್ರಧಾನಿ ಮೋದಿ
ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಉನ್ನತ ವೇದಿಕೆಯಿಂದ ವಿಶ್ವಶಾಂತಿಗಾಗಿ ತನ್ನ ಸಂದೇಶವನ್ನು ಪುನರುಚ್ಚರಿಸಿದ ಪ್ರಧಾನಿ ನರೇಂದ್ರ ಮೋದಿಯವರು,ಉನ್ನತ ಜಾಗತಿಕ ಸಂಸ್ಥೆಗಳಲ್ಲಿ ಸುಧಾರಣೆಗಳಿಗೆ ಕರೆ ನೀಡಿದರು. ಸುಧಾರಣೆಯು ಪ್ರಸ್ತುತತೆಯ ಕೀಲಿ ಕೈ ಎಂದು ಅವರು ಒತ್ತಿ ಹೇಳಿದರು.
ನ್ಯೂಯಾರ್ಕ್‌ನಲ್ಲಿಯ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಸೋಮವಾರ ನಡೆದ ‘ಭವಿಷ್ಯದ ಶೃಂಗಸಭೆ’ಯಲ್ಲಿ ಮಾತನಾಡಿದ ಮೋದಿ, ‘ಮಾನವೀಯತೆಯ ಯಶಸ್ಸು ನಮ್ಮ ಸಾಮೂಹಿಕ ಶಕ್ತಿಯಲ್ಲಿದೆ. ಯುದ್ಧಭೂಮಿಯಲ್ಲಿ ಅಲ್ಲ ಹಾಗೂ ವಿಶ್ವ ಶಾಂತಿ ಮತ್ತು ಅಭಿವೃದ್ಧಿಗಾಗಿ ಜಾಗತಿಕ ಸಂಸ್ಥೆಗಳಿಗೆ ಸುಧಾರಣೆ ಅಗತ್ಯವಾಗಿದೆ ’ಎಂದು ಹೇಳಿದರು.
‘ಜಾಗತಿಕ ಶಾಂತಿ ಮತ್ತು ಭದ್ರತೆಗೆ ಒಂದೆಡೆ ಭಯೋತ್ಪಾದನೆಯಂತಹ ದೊಡ್ಡ ಅಪಾಯವಿದೆ. ಇನ್ನೊಂದೆಡೆ ಸೈಬರ್, ಸಾಗರ, ಬಾಹ್ಯಾಕಾಶದಂತಹ ಹೊಸ ಸಂಘರ್ಷದ ಕ್ಷೇತ್ರಗಳೂ ಸೃಷ್ಟಿಯಾಗುತ್ತಿವೆ. ಈ ಎಲ್ಲ ವಿಷಯಗಳ ಕುರಿತಂತೆ, ಜಾಗತಿಕ ಕ್ರಿಯೆಯು ಜಾಗತಿಕ ಮಹತ್ವಾಕಾಂಕ್ಷೆಗೆ ಅನುಗುಣವಾಗಿರಬೇಕು ಎಂದು ಒತ್ತಿ ಹೇಳಲು ನಾನು ಬಯಸುತ್ತೇನೆ ’ ಎಂದರು.
ಹವಾಮಾನ ಬದಲಾವಣೆ, ಸಂಘರ್ಷ ಮತ್ತು ಮಾನವ ಹಕ್ಕುಗಳು ಸೇರಿದಂತೆ 21ನೇ ಶತಮಾನದ ಸವಾಲುಗಳನ್ನು ಎದುರಿಸಲು ರೂಪಿಸಲಾಗಿರುವ ‘ಭವಿಷ್ಯಕ್ಕಾಗಿ ಒಪ್ಪಂದ’ವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅಂಗೀಕರಿಸಿದ ಬಳಿಕ ಮೋದಿಯವರ ಈ ಶಾಂತಿ ಸಂದೇಶ ಹೊರಬಿದ್ದಿದೆ.
ಪ್ರಸ್ತುತ ಉಕ್ರೇನ್ ಜೊತೆ ಸಶಸ್ತ್ರ ಸಂಘರ್ಷದಲ್ಲಿ ತೊಡಗಿಕೊಂಡಿರುವ ರಷ್ಯಾ ನೇತೃತ್ವದ ಏಳು ರಾಷ್ಟ್ರಗಳ ಗುಂಪಿನ ಪ್ರತಿರೋಧದ ಹೊರತಾಗಿಯೂ ಈ ಒಪ್ಪಂದವನ್ನು ಅಂಗೀಕರಿಸಲಾಗಿದೆ.
ಒಪ್ಪಂದವನ್ನು ಟೀಕಿಸಿರುವ ರಷ್ಯಾ, ಒಪ್ಪಂದದಿಂದ ತೃಪ್ತರಾಗದ ದೇಶಗಳಿಗೆ ಹೆಚ್ಚಿನ ಮಾತುಕತೆಗಳಿಗೆ ಅವಕಾಶವನ್ನು ನೀಡಲಾಗಿಲ್ಲ ಎಂದು ವಾದಿಸಿದೆ.