ಕೇರಳದಲ್ಲಿ ದಾಖಲಾದ ಎಂಪಾಕ್ಸ್ ಪ್ರಕರಣ ವೇಗವಾಗಿ ಹರಡುವ ಕ್ಲೇಡ್ 1 ಪ್ರಭೇದಕ್ಕೆ ಸೇರಿದ್ದು : ವರದಿ

Update: 2024-09-24 15:58 GMT

ಸಾಂದರ್ಭಿಕ ಚಿತ್ರ

ತಿರುವನಂತಪುರ : ಕಳೆದ ವಾರ ಕೇರಳದಲ್ಲಿ ದಾಖಲಾದ ಎಂಪಾಕ್ಸ್ ಪ್ರಕರಣವು ವೇಗವಾಗಿ ಹರಡುವ ಸೋಂಕಿನ ಕ್ಲೇಡ್ 1 ಪ್ರಭೇದದ್ದು ಎನ್ನುವುದು ದೃಢಪಟ್ಟಿದೆ ಎಂದು ಆರೋಗ್ಯ ಸಚಿವಾಲಯದ ವಕ್ತಾರರಾದ ಮನೀಷಾ ವರ್ಮಾ ಅವರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.

ಇದು ಭಾರತದಲ್ಲಿ ಎಂಪಾಕ್ಸ್‌ನ ಕ್ಲೇಡ್ 1 ಪ್ರಭೇದದ ಮೊದಲ ಪ್ರಕರಣವಾಗಿದೆ.

ಎಂಪಾಕ್ಸ್ ಮಂಕಿಪಾಕ್ಸ್ ವೈರಸ್‌ನಿಂದ ಉಂಟಾಗುವ ಅಪರೂಪದ ಸೋಂಕು ಆಗಿದ್ದು, ಇದನ್ನು ಹಿಂದೆ ಮಂಕಿಪಾಕ್ಸ್ ಎಂದು ಕರೆಯಲಾಗುತ್ತಿತ್ತು. ಕ್ಲೇಡ್ 1 ಮತ್ತು 2 ಎಂಪಾಕ್ಸ್‌ಗೆ ಕಾರಣವಾಗುವ ಎರಡು ರೀತಿಯ ವೈರಸ್‌ಗಳಾಗಿವೆ.

ಪ್ರಸ್ತುತ ಆಫ್ರಿಕಾದಲ್ಲಿ ಹೆಚ್ಚುತ್ತಿರುವ ಪ್ರಕರಣಗಳಿಗೆ ಕ್ಲೇಡ್ 1 ಕಾರಣವಾಗಿದ್ದರೆ, 2022ರಲ್ಲಿ ಜಾಗತಿಕವಾಗಿ ದಿಢೀರ್ ಕಾಣಿಸಿಕೊಂಡಿದ್ದ ಸಾಂಕ್ರಾಮಿಕಕ್ಕೆ ಕ್ಲೇಡ್ 1ಕಾರಣವಾಗಿತ್ತು. ಐತಿಹಾಸಿಕವಾಗಿ ಕ್ಲೇಡ್ 2ಕ್ಕೆ ಹೋಲಿಸಿದರೆ ಕ್ಲೇಡ್ 1 ಹೆಚ್ಚಿನ ಸಂಖ್ಯೆಯ ತೀವ್ರ ಅನಾರೋಗ್ಯ ಪ್ರಕರಣಗಳಿಗೆ ಕಾರಣವಾಗಿದ್ದು,ಶೇ.10ರಷ್ಟು ಪ್ರಕರಣಗಳಲ್ಲಿ ಸಾವುಗಳು ಸಂಭವಿಸಿದ್ದವು.

ಇತ್ತೀಚಿನ ಸಾಂಕ್ರಾಮಿಕದಲ್ಲಿ ಸಾವುಗಳ ಪ್ರಮಾಣ ಸುಮಾರು ಶೇ.1ರಿಂದ ಶೇ.3.3ರಷ್ಟಿದೆ.

ಸೆ.9ರಂದು ಹರ್ಯಾಣದ ಹಿಸ್ಸಾರ್‌ನಲ್ಲಿ ದೇಶದ ಮೊದಲ ಎಂಪಾಕ್ಸ್ ಪ್ರಕರಣವನ್ನು ಕೇಂದ್ರ ಆರೋಗ್ಯ ಸಚಿವಾಲಯವು ದೃಢಪಡಿಸಿತ್ತು. 26 ಹರೆಯದ ಯುವಕ ಕ್ಲೇಡ್ 2 ತಳಿಗೆ ಪಾಸಿಟಿವ್ ಆಗಿದ್ದ.

ಯುಎಇಯಿಂದ ಮಲಪ್ಪುರಮ್‌ಗೆ ಮರಳಿದ ಬಳಿಕ ಎಂಪಾಕ್ಸ್ ಲಕ್ಷಣಗಳಿಗಾಗಿ ಸರಕಾರಿ ಮಂಜೇರಿ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 38ರ ಹರೆಯದ ವ್ಯಕ್ತಿಗೆ ಸೋಂಕು ತಗಲಿದ್ದನ್ನು ಕೇರಳ ಸರಕಾರವು ಕಳೆದ ಬುಧವಾರ ದೃಢಪಡಿಸಿತ್ತು.

ರೋಗಿಯ ಸುಮಾರು 29 ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಹಾಗೂ ವಿಮಾನದಲ್ಲಿದ್ದ 37 ಸಹಪ್ರಯಾಣಿಕರ ಮೇಲೆ ಅವರ ಮನೆಗಳಲ್ಲಿಯೇ ನಿಗಾಯಿರಿಸಲಾಗಿದೆ. ಅವರಲ್ಲಿ ಯಾರಿಗೂ ಈವರೆಗೆ ಎಂಪಾಕ್ಸ್ ಲಕ್ಷಣಗಳು ಕಂಡುಬಂದಿಲ್ಲ ಎಂದು ಮಲಪ್ಪುರಂ ಜಿಲ್ಲಾ ನೋಡಲ್ ಅಧಿಕಾರಿ ಡಾ.ಶುಬಿನ್ ಸಿ ಸೋಮವಾರ ಸುದ್ದಿಸಂಸ್ಥೆಗೆ ತಿಳಿಸಿದ್ದರು.

ಆಫ್ರಿಕಾದಲ್ಲಿ ಭುಗಿಲೆದ್ದಿದ್ದ ಎಂಪಾಕ್ಸ್ ಪಿಡುಗನ್ನು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ)ಯು ಆ.14ರಂದು ಜಾಗತಿಕ ತುರ್ತು ಸ್ಥಿತಿ ಎಂದು ಘೋಷಿಸಿತ್ತು. ಆ ಸಮಯದಲ್ಲಿ ಡಝನ್‌ಗೂ ಅಧಿಕ ದೇಶಗಳಲ್ಲಿ ಮಕ್ಕಳಲ್ಲಿ ಮತ್ತು ವಯಸ್ಕರಲ್ಲಿ ಎಂಪಾಕ್ಸ್ ಪ್ರಕರಣಗಳು ದೃಢಪಟ್ಟಿದ್ದವು.

ಡಬ್ಲ್ಯುಎಚ್‌ಒ 2022ರಲ್ಲಿ ಎಂಪಾಕ್ಸ್‌ನ್ನು ಅಂತರರಾಷ್ಟ್ರೀಯ ಕಳವಳದ ಸಾರ್ವಜನಿಕ ಆರೋಗ್ಯ ತುರ್ತು ಸ್ಥಿತಿ ಎಂದು ಘೋಷಿಸಿದ ಬಳಿಕ ಭಾರತದಲ್ಲಿ 32 ಎಂಪಾಕ್ಸ್ ಪ್ರಕರಣಗಳು ವರದಿಯಾಗಿವೆ.

ಸೋಂಕಿನ ಯಾವುದೇ ಲಕ್ಷಣಗಳು ಕಂಡು ಬಂದರೆ ಚಿಕಿತ್ಸೆ ಪಡೆದುಕೊಳ್ಳುವಂತೆ ಮತ್ತು ಆರೋಗ್ಯ ಇಲಾಖೆಗೆ ಮಾಹಿತಿ ನೀಡುವಂತೆ ಕೇರಳ ಸರಕಾರವು ಸಾರ್ವಜನಿಕರನ್ನು ಆಗ್ರಹಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News