16 ಸಾವಿರ ಮಂದಿಗೆ 125 ಕೋಟಿ ವಂಚನೆ: 21 ಸೈಬರ್ ಅಪರಾಧಿಗಳ ಬಂಧನ
ಗುರುಗ್ರಾಮ: ಬೃಹತ್ ಸೈಬರ್ ವಂಚನೆ ಜಾಲವನ್ನು ಬೇಧಿಸಿರುವ ಗುರುಗಾಂ ಪೊಲೀಸರು ಸೋಮವಾರ, 16 ಸಾವಿರ ಮಂದಿಗೆ 125 ಕೋಟಿ ರೂಪಾಯಿ ವಂಚಿಸಿದ ಆರೋಪದಲ್ಲಿ 21 ಮಂದಿ ವಂಚಕರನ್ನು ಬಂಧಿಸಿದ್ದಾರೆ.
21 ಮಂದಿ ಸೈಬರ್ ಅಪರಾಧಿಗಳಿಂದ ವಶಪಡಿಸಿಕೊಂಡ ಸಿಮ್ ಕಾರ್ಡ್ ಗಳು ಮತ್ತು ಮೊಬೈಲ್ ಫೋನ್ ಗಳ ಲಿಂಕೇಶ್ ವಿಶ್ಲೇಷಣೆಯಿಂದ ತಿಳಿದುಬಂದಂತೆ ಆರೋಪಿಗಳು 16788 ಮಂದಿಗೆ ದೇಶಾದ್ಯಂತ 125.6 ಕೋಟಿ ರೂಪಾಯಿಗಳನ್ನು ವಂಚಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
"ಆರೋಪಿಗಳಿಂದ ವಶಪಡಿಸಿಕೊಂಡ ಒಟ್ಟು 16 ಮೊಬೈಲ್ ಫೋನ್ ಗಳು ಮತ್ತು ಏಳು ಸಿಮ್ಕಾರ್ಡ್ಗಳ 14ಸಿ ವಿಶ್ಲೇಷಣೆಯಿಂದ ತಿಳಿದುಬಂದಂತೆ, 16788 ಸೈಬರ್ ವಂಚನೆ ಅಪರಾಧಗಳನ್ನು ಇದು ಒಳಗೊಂಡಿದ್ದು, 672ಸೈಬರ್ ಅಪರಾಧ ಪ್ರಕರಣಗಳು ದೇಶಾದ್ಯಂತ ದಾಖಲಾಗಿವೆ. ಇದರಿಂದ ಸಂತ್ರಸ್ತರಿಗೆ 125.6 ಕೋಟಿ ರೂಪಾಯಿ ನಷ್ಟವಾಗಿದೆ" ಎಂದು ಸೈಬರ್ ಅಪರಾಧ ಎಸಿಪಿ ಪ್ರಿಯಾಂಶು ದಿವಾನ್ ಹೇಳಿದ್ದಾರೆ.
ಒಟ್ಟು 672 ಪ್ರಕರಣಗಳ ಪೈಕಿ ಗುರುಗ್ರಾಮದಲ್ಲಿ 11 ಸೇರಿದಂತೆ 40 ಪ್ರಕರಣಗಳು ಹರ್ಯಾಣದಲ್ಲಿ ದಾಖಲಾಗಿವೆ ಎಂದು ಸ್ಪಷ್ಟಪಡಿಸಿದ್ದಾರೆ.
ವ್ಯಕ್ತಿಯೊಬ್ಬರು ಷೇರು ಮಾರುಕಟ್ಟೆ ಹಗರಣದಲ್ಲಿ 97 ಲಕ್ಷ ರೂಪಾಯಿಗಳನ್ನು ಕಳೆದುಕೊಂಡ ಬಗ್ಗೆ ಜೂನ್ 26ರಂದು ದೂರು ನೀಡಿದ ಹಿನ್ನೆಲೆಯಲ್ಲಿ ಭಾರತೀಯ ದಂಡಸಂಹಿತೆಯ ಸೆಕ್ಷನ್ 419 ಮತ್ತು 420ರ ಅನವಯ ಪ್ರಕರಣ ದಾಖಲಿಸಲಾಗಿತ್ತು. ಡಿಸೆಂಬರ್ 9ರಂದು ಸೈಬರ್ ಪೊಲೀಸರು ಉತ್ತರಾಖಂಡದ ಬಜ್ಪುರದ ಕೇಶವ ನಗರದಿಂದ ಅನೀಶ್ ಎಂಬಾತನನ್ನು ಬಂಧಿಸಿ ವಿಚಾರಣೆಗೆ ಗುರಿಪಡಿಸಿದಾಗ ಇಡೀ ಪ್ರಕರಣ ಬಹಿರಂಗವಾಗಿದೆ.