ವಿವಾದದ ಬಳಿಕವೂ 4 ದಿನಗಳಲ್ಲಿ 14 ಲಕ್ಷ ತಿರುಪತಿ ಲಡ್ಡುಗಳ ಮಾರಾಟ
ತಿರುಪತಿ : ತಿರುಮಲ ಬೆಟ್ಟದಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನದ ಲಡ್ಡು ಪ್ರಸಾದ ತಯಾರಿಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿದೆ ಎಂಬ ಆರೋಪಗಳು ರಾಜ್ಯದಲ್ಲಿ ಇತ್ತೀಚೆಗೆ ರಾಜಕೀಯ ಬಿರುಗಾಳಿ ಎಬ್ಬಿಸಿವೆಯಾದರೂ, ಅವು ಲಡ್ಡು ಪ್ರಸಾದದ ಮಾರಾಟದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.
ದೇವಸ್ಥಾನಕ್ಕೆ ಈಗಲೂ ಪ್ರತಿ ದಿನ 60,000ಕ್ಕೂ ಅಧಿಕ ಭಕ್ತರು ಭೇಟಿ ನೀಡುತ್ತಿದ್ದಾರೆ ಮತ್ತು ಕೇವಲ ನಾಲ್ಕು ದಿನಗಳಲ್ಲಿ 14 ಲಕ್ಷಕ್ಕೂ ಅಧಿಕ ತಿರುಪತಿ ಲಡ್ಡುಗಳು ಮಾರಾಟವಾಗಿವೆ.
ಸೆಪ್ಟಂಬರ್ 19ರಂದು 3.59 ಲಕ್ಷ, ಸೆಪ್ಟಂಬರ್ 20ರಂದು 3.17 ಲಕ್ಷ, ಸೆಪ್ಟಂಬರ್ 21ರಂದು 3.67 ಲಕ್ಷ ಮತ್ತು ಸೆಪ್ಟಂಬರ್ 22ರಂದು 3.60 ಲಕ್ಷ ಲಡ್ಡುಗಳು ಮಾರಾಟವಾಗಿವೆ ಎಂದು ದೇವಸ್ಥಾನದ ಅಂಕಿಸಂಖ್ಯೆಗಳು ತಿಳಿಸಿವೆ.
ದೇವಸ್ಥಾನದಲ್ಲಿ ಸಾಮಾನ್ಯವಾಗಿ ಪ್ರತಿ ದಿನ ಸರಾಸರಿ 3.50 ಲಕ್ಷ ಲಡ್ಡುಗಳು ಮಾರಾಟವಾಗುತ್ತಿದ್ದು, ಮೇಲಿನ ಅಂಕಿಸಂಖ್ಯೆಗಳು ಅದಕ್ಕೆ ಅನುಗುಣವಾಗಿಯೇ ಇದೆ.
ಪ್ರತಿ ದಿನ, ದೇವಸ್ಥಾನದಲ್ಲಿ 3 ಲಕ್ಷಕ್ಕೂ ಅಧಿಕ ಲಡ್ಡುಗಳನ್ನು ತಯಾರಿಸಲಾಗುತ್ತದೆ. ಅಲ್ಲಿಗೆ ಭೇಟಿ ನೀಡುವ ಭಕ್ತರು ಲಡ್ಡುಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸುತ್ತಾರೆ.
ಲಡ್ಡುಗಳನ್ನು ಕಡಲೆ ಬೇಳೆ, ತುಪ್ಪ, ಸಕ್ಕರೆ, ಗೋಡಂಬಿ, ಒಣ ದ್ರಾಕ್ಷಿ ಮತ್ತು ಬಾದಾಮಿಯಿಂದ ತಯಾರಿಸಲಾಗುತ್ತದೆ. ಲಡ್ಡುಗಳ ತಯಾರಿಯಲ್ಲಿ ಪ್ರತಿ ದಿನ ಸುಮಾರು 15,000 ಕೆಜಿ ತುಪ್ಪವನ್ನು ಬಳಸಲಾಗುತ್ತದೆ.
ಹಿಂದಿನ ವೈಎಸ್‌ಆರ್‌ಸಿಪಿ ಸರಕಾರದ ಅವಧಿಯಲ್ಲಿ ತಿರುಪತಿ ಲಡ್ಡು ತಯಾರಿಕೆಯಲ್ಲಿ ಬಳಸಲಾಗಿರುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಇತ್ತು ಎಂದು ಕಳೆದ ವಾರ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಆರೋಪಿಸಿದ ಬಳಿಕ, ರಾಜ್ಯ ರಾಜಕೀಯದಲ್ಲಿ ಭಾರೀ ಬಿರುಗಾಳಿ ಎದ್ದಿದೆ.
ತಿರುಪತಿ ತಿರುಮಲ ದೇವಸ್ಥಾನವು ಪರೀಕ್ಷೆಗಾಗಿ ಕಳುಹಿಸಿರುವ ತುಪ್ಪದ ಮಾದರಿಗಳಲ್ಲಿ ದನದ ಕೊಬ್ಬು, ಹಂದಿ ಕೊಬ್ಬು ಮತ್ತು ಮೀನಿನ ಎಣ್ಣೆ ಪತ್ತೆಯಾಗಿದೆ ಎಂದು ಗುಜರಾತ್‌ನ ಪ್ರಯೋಗಾಲಯವೊಂದರ ವರದಿ ಹೇಳಿದೆ.
ಈ ವಿಷಯದ ಬಗ್ಗೆ ತನಿಖೆ ಮಾಡಲು ಆಂಧ್ರಪ್ರದೇಶ ಸರಕಾರವು ವಿಶೇಷ ತನಿಖಾ ತಂಡ (SIT)ವೊಂದನ್ನು ರಚಿಸಿದೆ.
ದೇವಸ್ಥಾನದ ಪಾವಿತ್ರ್ಯವನ್ನು ಪುನಃಸ್ಥಾಪಿಸಲು ಸೋಮವಾರ ಶಾಂತಿ ಹೋಮ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಾಗಿತ್ತು. ದೇವಸ್ಥಾನದ ಪುರೋಹಿತರು ಲಡ್ಡುಗಳನ್ನು ತಯಾರಿಸುವ ಅಡುಗೆ ಕೋಣೆಯಲ್ಲಿ ಮತ್ತು ಲಡ್ಡು ತಯಾರಿಕಾ ವಸ್ತುಗಳ ಮೇಲೆ ಪವಿತ್ರ ಜಲವನ್ನು ಸಿಂಪಡಿಸಿದರು.