ಬ್ಯಾಂಕ್ ಹಗರಣದಲ್ಲಿ ಮಾಜಿ ಸಚಿವರಿಗೆ ಜೈಲು ಶಿಕ್ಷೆ: ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಹಿನ್ನಡೆ
ನಾಗಪುರ: ಮಹಾರಾಷ್ಟ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ಸುನೀಲ್ ಕೇದಾರ್ ಅವರಿಗೆ ನಾಗಪುರದ ನ್ಯಾಯಾಲಯವೊಂದು ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಈ ಪ್ರಕರಣವು ನಾಗಪುರ ಜಿಲ್ಲಾ ಕೇಂದ್ರೀಯ ಸಹಕಾರ ಬ್ಯಾಂಕ್‌ನಲ್ಲಿ ನಡೆದಿದ್ದ ರೈತರ ಹಣ ದುರ್ಬಳಕೆಗೆ ಸಂಬಂಧಿಸಿದ್ದಾಗಿದೆ ಎಂದು thehindu.com ವರದಿ ಮಾಡಿದೆ.
2001-2002ರ ಅವಧಿಯಲ್ಲಿ ಕಾಂಗ್ರೆಸ್ ನಾಯಕ ಸುನೀಲ್ ಕೇದಾರ್ ನಾಗಪುರ ಜಿಲ್ಲಾ ಕೇಂದ್ರೀಯ ಸಹಕಾರ ಬ್ಯಾಂಕ್‌ನ ಅಧ್ಯಕ್ಷರಾಗಿ ನಡೆದಿದ್ದ ಎರಡು ದಶಕಗಳ ಹಿಂದಿನ ಈ ಹಗರಣದಲ್ಲಿ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕರಾಗಿದ್ದ ಅಶೋಕ್ ಚೌಧರಿ ಸೇರಿದಂತೆ ಇನ್ನೂ ಐದು ಮಂದಿಯನ್ನು ನ್ಯಾಯಾಲಯವು ದೋಷಿಗಳು ಎಂದು ಘೋಷಿಸಿದೆ.
ನಾಗಪುರದ ಸಾವನೋರ್ ವಿಧಾನಸಭಾ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿರುವ ಸುನೀಲ್ ಕೇದಾರ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 409 (ಸಾರ್ವಜನಿಕ ಸೇವಕನಿಂದ ಕ್ರಿಮಿನಲ್ ವಿಶ್ವಾಸ ದ್ರೋಹ) ಹಾಗೂ 120ಬಿ (ವಂಚನೆ ಎಸಗಲು ಫೋರ್ಜರಿ) ಮತ್ತಿತರ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿತ್ತು.
ಒಂದು ವೇಳೆ ಅವರಿಗೆ ಜಾಮೀನು ನಿರಾಕರಣೆಯಾದರೆ, ತಕ್ಷಣವೇ ಬಂಧನಕ್ಕೊಳಗಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.