ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಚಂಡಮಾರುತ ಸಾಧ್ಯತೆ
ಹೊಸದಿಲ್ಲಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಉಂಟಾಗಿರುವ ಒತ್ತಡವು ತೀವ್ರಗೊಂಡು ಶುಕ್ರವಾರದೊಳಗೆ ಚಂಡಮಾರುತವಾಗಿ ಬದಲಾಗುವ ಸಾಧ್ಯತೆಯಿದೆಯೆಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯ ಬುಲೆಟಿನ್ ಗುರುವಾರ ತಿಳಿಸಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ನಿಮ್ನ ಒತ್ತಡವು ಗುರುವಾರ ತೀವ್ರತೆಯನ್ನು ಪಡೆದುಕೊಂಡಿದ್ದು, ಅದು ಉತ್ತರದಿಂದ ವಾಯವ್ಯದತ್ತ ತಾಸಿಗೆ 17 ಕಿ.ಮೀ. ವೇಗದಲ್ಲಿ ಚಲಿಸುತ್ತಿದೆ.
ಆಂಧ್ರಪ್ರದೇಶದ ವಿಶಾಖಪಟ್ಟಣಂನಿಂದ ಬಂಗಾಳಕೊಲ್ಲಿಯ 390 ಕಿ.ಮೀ. ಪೂರ್ವ-ಆಗ್ನೇಯದಲ್ಲಿ ಕೇಂದ್ರೀಕೃತವಾಗಿದ್ದ ಒತ್ತಡದ ಪರಿಸ್ಥಿತಿಯು ಗುರುವಾರ ಬೆಳಗ್ಗೆ 8.30ರ ವೇಳೆಗೆ ಒಡಿಶಾದ ದಕ್ಷಿಣ-ಆಗ್ನೇಯದ 320 ಕಿ.ಮೀ.ವಿಸ್ತೀರ್ಣ ಸಮುದ್ರ ಪ್ರದೇಶದಲ್ಲಿ ಕೇಂದ್ರೀತಗೊಂಡಿದೆ.
‘‘ಈ ವ್ಯವಸ್ಥೆಯು ಉತ್ತರ- ಆಗ್ನೇಯದೆಡೆಗೆ ಮುಂದುವರಿಯುವ ಸಾಧ್ಯತೆಯಿದೆ. ಆನಂತರ ಅದು ಮುಂದಿನ 24 ತಾಸುಗಳೊಳಗೆ ಚಂಡಮಾರುತವಾಗಿ ಪರಿವರ್ತನೆಗೊಳ್ಳಲಿದೆ ಹಾಗೂ ಮೊಂಗ್ಲಾ ಮತ್ತು ಖೆಪುಪಾರಾದ ನಡುವೆಯಿರುವ ಬಾಂಗ್ಲಾದೇಶದ ಕರಾವಳಿಯನ್ನು ತಾಸಿಗೆ 55-65 ಕಿ.ಮೀ.ವೇಗದಲ್ಲಿ ಶನಿವಾರ ನಸುಕಿನಲ್ಲಿ ದಾಟುವ ನಿರೀಕ್ಷೆಯಿದೆ.
ಚಂಡಮಾರುತದ ಪ್ರಭಾವದಿಂದಾಗಿ ಒಡಿಶಾ ಅದರಲ್ಲೂ ವಿಶೇಷವಾಗಿ ಆ ರಾಜ್ಯದ ಕರಾವಳಿ ಪ್ರಾಂತದಲ್ಲಿ ತಾಸಿಗೆ 40ರಿಂದ 70 ಕಿ.ಮೀ. ವೇಗದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಅವಧಿಯಲ್ಲಿ ಸಮುದ್ರವು ಪ್ರಕ್ಷುಬ್ಧವಾಗಿರುವುದರಿಂದ ನ. 18ರೊಳಗೆ ಮೀನುಗಾರರು ಆಳಸಮುದ್ರ ಪ್ರದೇಶಕ್ಕೆ ತೆರಳದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.