ಉತ್ತಮ ಕೆಲಸಗಳನ್ನು ಮಾಡಬೇಕು: ಗೋಮಾಂಸ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಅಸ್ಸಾಂ ಸರಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ

Update: 2025-02-22 13:34 IST
ಉತ್ತಮ ಕೆಲಸಗಳನ್ನು ಮಾಡಬೇಕು: ಗೋಮಾಂಸ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಅಸ್ಸಾಂ ಸರಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ

Photo | PTI

  • whatsapp icon

ಹೊಸದಿಲ್ಲಿ: ಗೋಮಾಂಸ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಅಸ್ಸಾಂ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ಇಂತಹ ಪ್ರಕರಣಗಳ ಹಿಂದೆ ಓಡುವುದಕ್ಕಿಂತ ಅಸ್ಸಾಂ ಸರಕಾರ ಉತ್ತಮ ಕೆಲಸಗಳನ್ನು ಮಾಡಬೇಕು ಎಂದು ಹೇಳಿದೆ.

ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರ ಪೀಠ ಆರೋಪಿ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗೆ ತಡೆ ನೀಡಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ಏಪ್ರಿಲ್ 16ಕ್ಕೆ ಮುಂದೂಡಿದ್ದಾರೆ.

ವಿಚಾರಣೆ ವೇಳೆ ಸರಕಾರದ ಪರ ವಕೀಲರು, ಮಾಂಸದ ಮಾದರಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇದು ಮೊದಲು ಪ್ಯಾಕೇಜ್ ಮಾಡಲಾದ ಮಾಂಸವಲ್ಲ, ಬದಲಿಗೆ ಹಸಿ ಮಾಂಸದ ಪ್ಯಾಕೆಟ್‌ಗಳಾಗಿವೆ. ನಮ್ಮ ಪ್ರಕರಣದಲ್ಲಿ, ಪ್ಯಾಕೇಜಿಂಗ್ ಹಾಗೂ ಮಾರಾಟ ಈ ಎರಡನ್ನೂ ಆರೋಪಿಯೇ ಮಾಡಿದ್ದಾನೆ ಎಂದು ವಾದಿಸಿದರು.

ಈ ವೇಳೆ ನ್ಯಾಯಮೂರ್ತಿಗಳು, ಇಂತಹ ಪ್ರಕರಣಗಳ ಹಿಂದೆ ಓಡುವುದಕ್ಕಿಂತ ಉತ್ತಮವಾದ ಕೆಲಸಗಳನ್ನು ರಾಜ್ಯವು ಮಾಡಬೇಕು ಎಂದು ಹೇಳಿದ್ದಾರೆ.

ಮಾಂಸ ಸಾಗಾಟದ ವಾಹನವನ್ನು ತಡೆದಾಗ ಚಾಲಕನಿಗೆ ಅದರಲ್ಲಿದ್ದ ನಿಜವಾದ ಉತ್ಪನ್ನದ ಬಗ್ಗೆ ಉತ್ತರಿಸಲು ಸಾಧ್ಯವಾಗಲಿಲ್ಲ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಪೀಠವು, ದನದ ಮಾಂಸ ಅಥವಾ ಇತರ ಮಾಂಸವಿದೆಯೇ ಎಂದು ಒಬ್ಬ ವ್ಯಕ್ತಿಗೆ ಹೇಗೆ ತಿಳಿಯುತ್ತದೆ? ಓರ್ವ ವ್ಯಕ್ತಿಯು ಯಾವ ಪ್ರಾಣಿಯ ಮಾಂಸ ಎಂದು ಹೇಗೆ ಗುರುತಿಸುತ್ತಾನೆ? ಬರಿಗಣ್ಣಿನಿಂದ ಅವುಗಳ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯಲಾಗುವುದಿಲ್ಲ ಎಂದು ಹೇಳಿದೆ.

ಅಸ್ಸಾಂನ ಜಾನುವಾರು ಸಂರಕ್ಷಣಾ ಕಾಯ್ದೆಯ ಸೆಕ್ಷನ್ 8ರ ಅಡಿ ತಾನು ಪ್ಯಾಕೇಜ್ ಹಾಗೂ ಸಾಗಣೆ ಮಾಡುತ್ತಿರುವುದು ಗೋಮಾಂಸವನ್ನು ಎನ್ನುವ ಅರಿವು ಆರೋಪಿಗೆ ಇದ್ದಾಗ ಮಾತ್ರ ಅದು ಕಾಯ್ದೆಯಡಿ ಶಿಕ್ಷೆಗೆ ಕಾರಣವಾಗುತ್ತದೆ ಎನ್ನುವ ಅಂಶವನ್ನು ಇದೇ ವೇಳೆ ನ್ಯಾಯಾಲಯ ವಿವರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - siddik

contributor

Byline - ವಾರ್ತಾಭಾರತಿ

contributor

Similar News