ಬಂಗಾಳ ಕೊಲ್ಲಿಯಲ್ಲಿ ‘ಡಾನಾ’ ಚಂಡಮಾರುತದ ಭೀತಿ
ಭುವನೇಶ್ವರ : ಮಧ್ಯ ಬಂಗಾಳ ಕೊಲ್ಲಿಯ ಮೇಲೆ ನಿಮ್ನ ಒತ್ತಡ ಪ್ರದೇಶ ಸೃಷ್ಟಿಯಾಗಿರುವುದರಿಂದ ಮುಂದಿನ ವಾರ ಬಲವಾದ ಚಂಡಮಾರುತವು ರೂಪುಗೊಳ್ಳುವ ಸಾಧ್ಯತೆಯಿದ್ದು, ಅಕ್ಟೋಬರ್ 24ರೊಳಗೆ ಒಡಿಶಾ-ಪಶ್ಚಿಮಬಂಗಾಳ ಕರಾವಳಿಯನ್ನು ತಲುಪುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ರವಿವಾರ ತಿಳಿಸಿದೆ.
ಮಧ್ಯ ಅಂಡಮಾನ್ ಸಮುದ್ರದ ಮೇಲೆ ಉಂಟಾಗಿರುವ ಚಂಡಮಾರುತದ ಸುಳಿಯು, ಅಕ್ಟೊಬರ್ 23ರೊಳಗೆ ‘ದಾನಾ’ ಚಂಡಮಾರುತವಾಗಿ ರೂಪುಗೊಳ್ಳಲಿದ್ದು, ವಾಯವ್ಯ ಬಂಗಾಳಕೊಲ್ಲಿ ಹಾಗೂ ಒಡಿಶಾ-ಪಶ್ಚಿಮಬಂಗಾಳ ಕರಾವಳಿ ಪ್ರದೇಶಕ್ಕೆ ಅಕ್ಟೋಬರ್ 24ರಂದು ತಲುಪುವ ನಿರೀಕ್ಷೆಯಿದೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ.
ಆದುದರಿಂದ ಮೀನುಗಾರರು ಅಂಡಮಾನ್ ಸಮುದ್ರಕ್ಕೆ ಅಕ್ಟೋಬರ್ 21ರವರೆಗೆ ಮತ್ತು ಮಧ್ಯಬಂಗಾಳ ಕೊಲ್ಲಿ ಪ್ರದೇಶದಲ್ಲಿ ಅಕ್ಟೋಬರ್ 22 ,23 ಹಾಗೂ 24ರಂದು ಮತ್ತು ಉತ್ತರ ಬಂಗಾಳ ಕೊಲ್ಲಿಯಲ್ಲಿ ಅಕ್ಟೋಬರ್ 24ರಿಂದ 25ರವರೆಗೆ ಸಮುದ್ರಕ್ಕೆ ತೆರಳದಂತೆ ಸೂಚನೆ ನೀಡಿದೆ.
ಅಮೆರಿಕ ಮೂಲದ ರಾಷ್ಟೀಯ ಪಾರಿಸಾರಿಕ ಮುನ್ಸೂಚನೆ (ಎನ್ಸಿಇಪಿಒ)ಗಾಗಿನ ರಾಷ್ಟ್ರೀಯ ಕೇಂದ್ರವು, ಮಧ್ಯಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ನಿಮ್ನ ಒತ್ತಡವು ವಾರಾಂತ್ಯದೊಳಗೆ ಚಂಡಮಾರುತವಾಗಿ ರೂಪುಗೊಳ್ಳಲಿದೆಯೆಂದು ತಿಳಿಸಿದೆ. ಖತರ್ ದೇಶವು ಪ್ರಸ್ತಾವಿಸಿರುವಂತೆ ಈ ಚಂಡಮಾರುತಕ್ಕೆ ದಾನಾ ಎಂದು ಹೆಸರಿಸಲಾಗುವುದು ಎಂದು ಅದು ಹೇಳಿದೆ.
ಮಧ್ಯಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ನಿಮ್ನ ಒತ್ತಡದಿಂದಾಗಿ ಕೋಲ್ಕತಾ ನಗರ ಸೇರಿದಂತೆ ಪಶ್ಚಿಮ ಬಂಗಾಳದ ದಕ್ಷಿಣ ಬಂಗಾಳದ ಗಂಗಾ ತಪ್ಪಲು ಪ್ರದೇಶಗಳು, ದಕ್ಷಿಣ 23 ಪರಗಣ, ಉತ್ತರ 24 ಪರಗಣ, ಬಿರ್ಭೂಮ್, ಮುರ್ಷಿದಾಬಾದ್ ಮತ್ತು ನಾಡಿಯಾ ಜಿಲ್ಲೆಗಳಲ್ಲಿ ಅಕ್ಟೋಬರ್ 23 ಹಾಗೂ 24ರಂದು ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಚಂಡಮಾರುತದ ಪರಿಣಾಮವಾಗಿ ಕರ್ನಾಟಕ, ಆಂಧ್ರ ಸೇರಿದಂತೆ ದಕ್ಷಿಣ ಭಾರತದಲ್ಲೂ ಭಾರೀ ಮಳೆಯಾಗುವ ಸಾಧ್ಯತೆಯಿರುವುದಾಗಿ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.