ಬಿಲ್ಕಿಸ್‌ ಬಾನು ಪ್ರಕರಣ: ಶರಣಾಗತಿಗೆ ಕಾಲಾವಕಾಶ ಕೋರಿ ಸುಪ್ರೀಂ ಕೋರ್ಟ್‌ ಕದ ತಟ್ಟಿದ ಮೂವರು ಅಪರಾಧಿಗಳು

Update: 2024-01-18 06:26 GMT

ಬಿಲ್ಕಿಸ್‌ ಬಾನು ಪ್ರಕರಣದ ಆರೋಪಿಗಳು (PTI)

ಹೊಸದಿಲ್ಲಿ: ಬಿಲ್ಕಿಸ್‌ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದ ಮೂವರು ಅಪರಾಧಿಗಳು ಶರಣಾಗತಿಗೆ ಹೆಚ್ಚಿನ ಕಾಲಾವಕಾಶ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಇಂದು ಒಪ್ಪಿದೆ.

ಪ್ರಕರಣದ 11 ಅಪರಾಧಿಗಳ ಜೀವಾವಧಿ ಶಿಕ್ಷೆ ಕಡಿತಗೊಳಿಸಿ ಅವರನ್ನು ಬಿಡುಗಡೆಗೊಳಿಸಿ ಗುಜರಾತ್‌ ಸರ್ಕಾರ ಹೊರಡಿಸಿದ್ದ ಆದೇಶ ರದ್ದುಪಡಿಸಿ, ಅಪರಾಧಿಗಳಿಗೆ ಎರಡು ವಾರಗಳೊಳಗೆ ಶರಣಾಗುವಂತೆ ಸುಪ್ರಿಂ ಕೋರ್ಟ್‌ ತೀರ್ಪು ಪ್ರಕಟಗೊಂಡ ಒಂದು ವಾರದ ನಂತರ ಮೂವರು ಅಪರಾಧಿಗಳು ಶರಣಾಗತಿಗೆ ಕಾಲಾವಕಾಶ ಕೋರಿದ್ದಾರೆ.

ಸುಪ್ರೀಂ ಕೋರ್ಟ್‌ ಆದೇಶದಂತೆ ಅಪರಾಧಿಗಳಿಗೆ ಶರಣಾಗಲು ಜನವರಿ 21 ಕೊನೆಯ ದಿನಾಂಕವಾಗಿರುವುದರಿಂದ ಅವರು ಸಲ್ಲಿಸಿದ್ದ ಅರ್ಜಿಯನ್ನು ಆದಷ್ಟು ಬೇಗ ವಿಚಾರಣೆ ನಡೆಸಬೇಕೆಂದು ಹಿರಿಯ ವಕೀಲ ವಿ ಚಿತಂಬರೇಶ್‌ ಕೋರಿದರು.

ಈ ಅರ್ಜಿಗಳ ವಿಚಾರಣೆಯನ್ನು ಶುಕ್ರವಾರ ನಡೆಸಲು ಪೀಠವನ್ನು ರಚಿಸುವಂತೆ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅವರಿಗೆ ಕೋರಲು ರಿಜಿಸ್ಟ್ರಿಗೆ ನ್ಯಾಯಮೂರ್ತಿ ಬಿ ವಿ ನಾಗರತ್ನ ಸೂಚಿಸಿದ್ದಾರೆ.

ಹೆಚ್ಚಿನ ಕಾಲಾವಕಾಶಕ್ಕಾಗಿ ಮೂವರು ಅಪರಾಧಿಗಳು ಕುಟುಂಬದಲ್ಲಿ ನಡೆಯಲಿರುವ ವಿವಾಹಗಳು, ಅವಲಂಬಿತ ಹೆತ್ತವರು ಹಾಗೂ ಬೆಳೆ ಕೊಯ್ಲು ಸಮಯ ಮುಂತಾದ ಕಾರಣಗಳನ್ನು ನೀಡಿದ್ದಾರೆ.

ಗೋವಿಂದ್‌ಭಾಯಿ ನಾಯ್‌ ವೃತ್ತಿಯಲ್ಲಿ ಕ್ಷೌರಿಕನಾಗಿದ್ದು, ತನ್ನ 88 ವರ್ಷದ ಹಾಸಿಗೆ ಹಿಡಿದಿರುವ ತಂದೆ ಹಾಗೂ 75 ವರ್ಷದ ತಾಯಿ ಸಂಪೂರ್ಣವಾಗಿ ತನ್ನ ಮೇಲೆ ಅವಲಂಬಿತರಾಗಿದ್ದಾರೆ, ಇಬ್ಬರು ಮಕ್ಕಳ ಆರ್ಥಿಕ ಅವಶ್ಯಕತೆಗಳನ್ನೂ ಪೂರೈಸಬೇಕಿದೆ, ತನಗೆ ಅಸ್ತಮಾ ಇದೆ, ಇತ್ತೀಚೆಗೆ ಶಸ್ತ್ರಕ್ರಿಯೆಗೆ ಒಳಗಾಗಿದ್ದೇನೆ, ಶರಣಾಗತಿಗೆ ನಾಲ್ಕು ವಾರ ಕಾಲಾವಕಾಶ ನೀಡಿ ಎಂದು ಆತ ಕೋರಿದ್ದಾನೆ.

ಇನ್ನೊಬ್ಬ ಅಪರಾಧಿ ರಮೇಶ್‌ ಚಂದನಾ ತನ್ನ ಮಗನ ವಿವಾಹವಿದೆ ಎಂದು ಹೇಳಿ ಆರು ವಾರಗಳ ಕಾಲಾವಕಾಶ ಕೋರಿದ್ದರೆ ಮಿತೇಶ್‌ ಭಟ್ ಬೆಳೆ ಕೊಯ್ಲು ಸಮಯ ಎಂದು ಹೇಳಿ ಆರು ವಾರ ಕಾಲಾವಕಾಶ ಕೋರಿದ್ದಾನೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News