ದುರಹಂಕಾರದ ಕಾರಣಕ್ಕೆ ಲೋಕಸಭೆ ಚುನಾವಣೆಯಲ್ಲಿ ಬಹುಮತ ಪಡೆಯಲು ಬಿಜೆಪಿ ವಿಫಲ : ಆರ್‌ಎಸ್‌ಎಸ್ ನಾಯಕ ಇಂದ್ರೇಶ್ ಕುಮಾರ್

Update: 2024-06-14 15:18 GMT

ಇಂದ್ರೇಶ್ ಕುಮಾರ್ | PC : NDTV 

ಜೈಪುರ: ದುರಹಂಕಾರದ ಕಾರಣದಿಂದ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯಲು ವಿಫಲವಾಯಿತು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್)ದ ನಾಯಕ ಇಂದ್ರೇಶ್ ಕುಮಾರ್ ಅವರು ಗುರುವಾರ ಹೇಳಿದ್ದಾರೆ.

ಇಂದ್ರೇಶ್ ಕುಮಾರ್ ಅವರು ಆರ್‌ಎಸ್‌ಎಸ್ ನ  ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯ ಸದಸ್ಯರಾಗಿದ್ದಾರೆ.

ರಾಜಸ್ಥಾನದ ಜೈಪುರದ ಕನೋಟಾದಲ್ಲಿ ರಾಮರಥ್ ಅಯೋಧ್ಯಾ ಯಾತ್ರ ದರ್ಶನ್ ಪೂಜನ್ ಸಮರೋಹ್ನಲ್ಲಿ ಮಾತನಾಡಿದ ಇಂದ್ರೇಶ್ ಕುಮಾರ್, ರಾಮನನ್ನು ಪೂಜಿಸಿದವರು ಕ್ರಮೇಣ ದುರಹಂಕಾರಿಗಳಾದರು. ದೊಡ್ಡ ಪಕ್ಷ ಎಂದು ಹೇಳಿಕೊಳ್ಳುವ ದುರಹಂಕಾರಿಗಳಾದವರನ್ನು ರಾಮ 241ಕ್ಕೆ ನಿಲ್ಲಿಸಿದ ಎಂದು ಬಿಜೆಪಿಯನ್ನು ಉಲ್ಲೇಖಿಸಿ ಹೇಳಿದ್ದಾರೆ.

ಅಲ್ಲದೆ, ಯಾರಿಗೆ ರಾಮನ ಬಗ್ಗೆ ನಂಬಿಕೆ ಇಲ್ಲವೋ, ಅವರು ಒಟ್ಟಾದರೂ ಅವರನ್ನು 234ಕ್ಕೆ ನಿಲ್ಲಿಸಿದ್ದಾನೆ ಎಂದು ‘ಇಂಡಿಯಾ’ವನ್ನು ಉಲ್ಲೇಖಿಸಿ ಹೇಳಿದ್ದಾರೆ.

‘‘ಪ್ರಜಾಪ್ರಭುತ್ವದಲ್ಲಿ ರಾಮರಾಜ್ಯದ ನ್ಯಾಯವನ್ನು ನೋಡಿ. ರಾಮನನ್ನು ಪೂಜಿಸಿದವರು ಕ್ರಮೇಣ ದುರಹಂಕಾರಿಗಳಾದರು. ಆ ಪಕ್ಷ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿತು. ಆದರೆ, ಅವರ ದುರಹಂಕಾರದ ಕಾರಣಕ್ಕೆ ಅವರಿಗೆ ನೀಡಬೇಕಾಗಿದ್ದ ಮತ ಹಾಗೂ ಅಧಿಕಾರವನ್ನು ದೇವರು ನಿಲ್ಲಿಸಿದನು’’ ಎಂದು ಅವರು ತಿಳಿಸಿದ್ದಾರೆ.

ರಾಮನನ್ನು ವಿರೋಧಿಸಿದ ಯಾರೊಬ್ಬರಿಗೂ ಅಧಿಕಾರ ನೀಡಿಲ್ಲ. ಅವರೆಲ್ಲರೂ ಒಟ್ಟಾದರೂ ಎರಡನೇ ಸ್ಥಾನದಲ್ಲಿ ಇರುವಂತೆ ಮಾಡಲಾಯಿತು. ದೇವರ ನ್ಯಾಯ ನಿಜ ಹಾಗೂ ಆನಂದದಾಯಕ ಎಂದು ಅವರು ಹೇಳಿದ್ದಾರೆ.

ಲೋಕಸಭಾ ಚುನಾವಣೆಯ ಸಂದರ್ಭ ಸಭ್ಯತೆಯನ್ನು ಉಳಿಸಿಕೊಂಡಿಲ್ಲ. ಪ್ರತಿಪಕ್ಷಗಳನ್ನು ಪ್ರತಿಸ್ಪರ್ಧಿಗಳಂತೆ ಪರಿಗಣಿಸಬೇಕೇ ಹೊರತು ಶತ್ರುಗಳಂತಲ್ಲ ಎಂದು ಸ್ವಂಯ ಸೇವಕ ಸಂಘ (ಆರ್‌ಎಸ್‌ಎಸ್)ದ ವರಿಷ್ಠ ಮೋಹನ್ ಭಾಗವತ್ ಅವರು ಬಿಜೆಪಿಯನ್ನು ಟೀಕಿಸಿದ ಮೂರು ದಿನಗಳ ಬಳಿಕ ಇಂದ್ರೇಶ್ ಕುಮಾರ್ ಈ ಹೇಳಿಕೆ ನೀಡಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News