ಮುಸ್ಲಿಮರ ಆಸ್ತಿಯನ್ನು ಅಕ್ರಮವಾಗಿ ನೆಲಸಮಗೊಳಿಸಲು ಬಿಜೆಪಿ ಸರ್ಕಾರಗಳು ಜೆಸಿಬಿಯನ್ನು ಅಸ್ತ್ರವನ್ನಾಗಿಸಿದೆ: ಆಮ್ನೆಸ್ಟಿ ತನಿಖಾ ವರದಿ
ಹೊಸದಿಲ್ಲಿ: ಬಿಜೆಪಿ ಆಡಳಿತವಿರುವ ಅಸ್ಸಾಂ, ದಿಲ್ಲಿ, ಗುಜರಾತ್, ಉತ್ತರ ಪ್ರದೇಶ ಹಾಗೂ ಮಧ್ಯ ಪ್ರದೇಶದಲ್ಲಿ ಕನಿಷ್ಠ 33 ನಿದರ್ಶನಗಳಲ್ಲಿ ಮುಸ್ಲಿಮರ ಆಸ್ತಿಪಾಸ್ತಿಯನ್ನು ಕಾನೂನುಬಾಹಿರ ಹಾಗೂ ನಿರಂಕುಶವಾಗಿ ನೆಲಸಮಗೊಳಿಸಲು ಪದೇ ಪದೇ ಜೆಸಿಬಿ ವಾಹನವನ್ನು ಪ್ರಾಧಿಕಾರಗಳು ಬಳಸಿವೆ ಎಂದು ದಾಖಲೀಕರಣಗೊಂಡಿರುವ 128 ನೆಲಸಮ ಪ್ರಕರಣಗಳ ಪೈಕಿ ತಾನು ನಡೆಸಿರುವ 63 ಪ್ರಕರಣಗಳ ತನಿಖೆಯಲ್ಲಿ ಕಂಡು ಬಂದಿದೆ ಎಂದು ಆಮ್ನೆಸ್ಟಿ ಇಂಟರ್ ನ್ಯಾಷನಲ್ ತನಿಖಾ ವರದಿಯಲ್ಲಿ ಹೇಳಿದೆ ಎಂದು newslaundry.com ವರದಿ ಮಾಡಿದೆ.
ತನ್ನೆರಡು ವರದಿಗಳಲ್ಲಿ ಮಾನವ ಹಕ್ಕುಗಳ ಗುಂಪಾದ ಆಮ್ನೆಸ್ಟಿ ಇಂಟರ್ ನ್ಯಾಷನಲ್, ಜೆಸಿಬಿ ಬುಲ್ಡೋಜರ್ ಗಳು ಹಾಗೂ ಇನ್ನಿತರ ಯಂತ್ರಗಳ ಮೂಲಕ ಮುಸ್ಲಿಮರ ಮನೆಗಳು, ವ್ಯಾಪಾರ ಸ್ಥಳಗಳು ಹಾಗೂ ಪ್ರಾರ್ಥನಾ ಸ್ಥಳಗಳನ್ನು ವ್ಯಾಪಕ ಕಾನೂನುಬಾಹಿರ ಕ್ರಮಗಳ ಮೂಲಕ ನೆಲಸಮಗೊಳಿಸಲಾಗಿದ್ದು, ಈ ಕ್ರಮವನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಆಮ್ನೆಸ್ಟಿ ಆಗ್ರಹಿಸಿದೆ.
ಸ್ಥಳಕ್ಕೆ ಭೇಟಿ ನೀಡಿ ಹಾಗೂ ತಮ್ಮ ಆಸ್ತಿಪಾಸ್ತಿ ನೆಲಸಮಗೊಂಡಿರುವ ನೂರಾರು ಸಂತ್ರಸ್ತರು, ಕಾನೂನು ತಜ್ಞರು, ಪತ್ರಕರ್ತರು ಹಾಗೂ ಸಮುದಾಯದ ನಾಯಕರೊಂದಿಗೆ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಸಂದರ್ಶನ ನಡೆಸಿದೆ. ಇದರೊಂದಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಲಭ್ಯವಾಗಿರುವ 69 ವಿಡಿಯೊಗಳು ಹಾಗೂ ಸಂತ್ರಸ್ತರು ಒದಗಿಸಿರುವ 9 ವಿಡಿಯೊಗಳ ನೈಜತೆಯನ್ನು ಪರಿಶೀಲಿಸುವ ಪ್ರಯತ್ನವನ್ನೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಮಾಡಿದೆ. ಈ ಪೈಕಿ ಹಲವಾರು ಸ್ಥಳಗಳನ್ನು ಉಪಗ್ರಹ ಒದಗಿಸುವ ಭೌಗೋಳಿಕ ಮಾಹಿತಿ ಹಾಗೂ ಗೂಗಲ್ ಅರ್ತ್ ಮತ್ತು ಮ್ಯಾಪಿಲರಿ ಮೂಲಕ ಚಿತ್ರಗಳನ್ನು ಪರಿಶೀಲಿಸುವುದರೊಂದಿಗೆ ನೆಲಸಮಗೊಂಡ ಕಟ್ಟಡಗಳನ್ನು ಪತ್ತೆ ಹಚ್ಚಿದೆ.
ಮುಸ್ಲಿಂ ಬಾಹುಳ್ಯವಿರುವ ಪ್ರದೇಶಗಳನ್ನು ನೆಲಸಮಗೊಳಿಸಲು ಆಯ್ಕೆ ಮಾಡಿಕೊಳ್ಳಲಾಗಿದ್ದು, ವೈವಿಧ್ಯತೆ ಇರುವ ಪ್ರದೇಶಗಳಲ್ಲಿ ಮುಸ್ಲಿಮರ ಆಸ್ತಿಪಾಸಿಗಳನ್ನು ಆಯ್ಕೆ ಮಾಡಿಕೊಂಡು ಗುರಿಯಾಗಿಸಿಕೊಳ್ಳಲಾಗಿದೆ, ನಿರ್ದಿಷ್ಟವಾಗಿ ಗುಜರಾತ್ ಮತ್ತು ಮಧ್ಯಪ್ರದೇಶದಲ್ಲಿ ಮುಸ್ಲಿಮರ ಆಸ್ತಿಪಾಸ್ತಿಗಳ ಸಮೀಪವೇ ಇರುವ ಹಿಂದೂಗಳ ಸ್ವತ್ತುಗಳನ್ನು ಮುಟ್ಟಲೂ ಹೋಗಿಲ್ಲ ಎಂಬುದರತ್ತಲೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಬೊಟ್ಟು ಮಾಡಿದೆ.
ಈ ಕಾನೂನು ಬಾಹಿರ ಕ್ರಮಗಳ ಕುರಿತು ಸರ್ಕಾರಗಳನ್ನು ಪ್ರಶ್ನಿಸುವುದರೊಂದಿಗೆ, ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ದ್ವೇಷದ ಅಭಿಯಾನ ನಡೆಸಲು ಬಳಸಲಾಗುತ್ತಿರುವ ವಸ್ತುಶಃ ನೀತಿಯನ್ನು ಸ್ಥಗಿತಗೊಳಿಸಬೇಕು ಎಂದೂ ಸರ್ಕಾರಗಳನ್ನು ಆಗ್ರಹಿಸಲಾಗಿದೆ. ಈ ನೆಲಸಮ ಕಾರ್ಯಾಚರಣೆಗಳಲ್ಲಿ ಜೆಸಿಬಿ ಯಂತ್ರವನ್ನು ವ್ಯಾಪಕವಾಗಿ ನಿಯೋಜಿಸಲಾಗಿದೆ ಎಂಬುದನ್ನೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಗಣನೆಗೆ ತೆಗೆದುಕೊಂಡಿದೆ. ಇದಲ್ಲದೆ, ತನ್ನ ಯಂತ್ರೋಪಕರಣಗಳನ್ನು ಪ್ರತಿಕೂಲಕರ ಮಾನವ ಹಕ್ಕು ಉಲ್ಲಂಘನೆಗೆ ಬಳಸುವುದನ್ನು ತಡೆಯುವುದು ಬ್ರಿಟನ್ ಮೂಲದ ಕಂಪನಿಯ ಹೊಣೆಗಾರಿಕೆಯಾಗಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ.
ನೆಲಸಮ ಕಾರ್ಯಾಚರಣೆಯ ಕಾನೂನು ಬದ್ಧತೆ ಹಾಗೂ ಮುಸ್ಲಿಂ ಸಮುದಾಯದ ವಿರುದ್ಧ ತಾರತಮ್ಯದಿಂದ ನಡೆಯುತ್ತಿರುವ ಈ ಕಾರ್ಯಾಚರಣೆಯನ್ನು ಪರಿಗಣಿಸುವಲ್ಲಿ ಭಾರತೀಯ ಮಾಧ್ಯಮಗಳು ವಿಫಲಗೊಂಡಿವೆ ಎಂದೂ ವರದಿಯಲ್ಲಿ ಹೇಳಲಾಗಿದೆ.
ಇಂತಹ ನೆಲಸಮ ಕಾರ್ಯಾಚರಣೆಗಳು ಒಂದು ಬಗೆಯ ನ್ಯಾಯಾಂಗಾತೀತ ಶಿಕ್ಷೆಯಾಗಿದ್ದು, ಇಂತಹ ಕಾರ್ಯಾಚರಣೆಗಳನ್ನು ಅಂತಾರಾಷ್ಟ್ರೀಯ ಕಾನೂನುಗಳು ನಿರ್ಬಂಧಿಸಿವೆ ಎಂದೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಹೇಳಿದೆ. ಈ ಉಲ್ಲಂಘನೆಗಳಿಗೆ ಜವಾಬ್ದಾರರಾಗಿರುವವರನ್ನು ಉತ್ತರದಾಯಿಗಳನ್ನಾಗಿಸಬೇಕು ಹಾಗೂ ಸಂತ್ರಸ್ತರಿಗೆ ಸಮರ್ಪಕ ಪರಿಹಾರವನ್ನು ಒದಗಿಸಬೇಕು ಎಂದೂ ಅದು ಆಗ್ರಹಿಸಿದೆ.