ಕಾಂಗ್ರೆಸ್ ಅಭ್ಯರ್ಥಿಗಳು ಕ್ರಿಮಿನಲ್ ದಾಖಲೆಗಳನ್ನು ಬಹಿರಂಗಗೊಳಿಸಿಲ್ಲ ಎಂದು ಚುನಾವಣಾಧಿಕಾರಿಗೆ ದೂರು ನೀಡಿದ ಬಿಜೆಪಿ
ರಾಯಪುರ: 83 ಕಾಂಗ್ರೆಸ್ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಘೋಷಣೆಯಾದ 48 ಗಂಟೆಗಳಲ್ಲಿ ಚುನಾವಣಾ ಆಯೋಗಕ್ಕೆ ತಮ್ಮ ಕ್ರಿಮಿನಲ್ ದಾಖಲೆಗಳ ವಿವರಗಳನ್ನು ಸಲ್ಲಿಸಿಲ್ಲ ಎಂದು ಆರೋಪಿಸಿರುವ ಛತ್ತೀಸ್‌ಗಡದಲ್ಲಿಯ ಪ್ರತಿಪಕ್ಷ ಬಿಜೆಪಿಯು,ಅವರ ವಿರುದ್ಧ ಕ್ರಮವನ್ನು ಕೋರಿ ಇಲ್ಲಿ ಮುಖ್ಯ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದೆ. ಬಿಜೆಪಿ ತನ್ನ ಅಭ್ಯರ್ಥಿಗಳ ಸುಳ್ಳು ಆರೋಪಗಳನ್ನು ಹೊರಿಸುತ್ತಿದೆ ಎಂದು ಆಡಳಿತಾರೂಢ ಕಾಂಗ್ರೆಸ್ ಹೇಳಿದೆ.
ಛತ್ತೀಸ್‌ಗಡ ವಿಧಾನಸಭೆಗೆ ನ.7 ಮತ್ತು 17ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು,ಕಾಂಗ್ರೆಸ್ ಈವರೆಗೆ ರಾಜ್ಯದಲ್ಲಿಯ 90 ಕ್ಷೇತ್ರಗಳ ಪೈಕಿ 83 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.
ಮುಖ್ಯ ಚುನಾವಣಾಧಿಕಾರಿಗಳಿಗೆ ಶನಿವಾರ ಸಲ್ಲಿಸಿರುವ ದೂರಿನಲ್ಲಿ ಬಿಜೆಪಿಯು ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲೇಖಿಸಿದೆ. ಈ ಆದೇಶದಂತೆ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಘೋಷಿಸಿದ 48 ಗಂಟೆಗಳಲ್ಲಿ ಅವರ ಕ್ರಿಮಿನಲ್ ಇತಿಹಾಸದ ಮಾಹಿತಿಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ಬಿಜೆಪಿಯ ರಾಜ್ಯ ಕಾನೂನು ಕೋಶದ ಸಂಚಾಲಕ ಜೈಪ್ರಕಾಶ ಚಂದ್ರವಂಶಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ತನ್ನ 83 ಅಭ್ಯರ್ಥಿಗಳ ಕ್ರಿಮಿನಲ್ ದಾಖಲೆಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿಲ್ಲ. ಪಕ್ಷದ ವೆಬ್‌ಸೈಟ್‌ನಲ್ಲಿ,ಸಾಮಾಜಿಕ ಮಾಧ್ಯಮಗಳಲ್ಲಿ ಅಥವಾ ಒಂದು ರಾಷ್ಟ್ರೀಯ ಮತ್ತು ಒಂದು ಸ್ಥಳೀಯ ಸೇರಿದಂತೆ ಎರಡು ವೃತ್ತಪತ್ರಿಕೆಗಳಲ್ಲಿಯೂ ಪ್ರಕಟಿಸಿಲ್ಲ. ಇದು ಸರ್ವೋಚ್ಚ ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗಿದೆ. ತಮ್ಮ ಕ್ರಿಮಿನಲ್ ದಾಖಲೆಗಳನ್ನು ಸಲ್ಲಿಸದ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ದೂರಿನೊಂದಿಗೆ ಲಗತ್ತಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಕ್ರಿಮಿನಲ್ ಪ್ರವೃತ್ತಿಯ ಜನರಿಗೆ ಪಕ್ಷವು ಟಿಕೆಟ್‌ಗಳನ್ನು ನೀಡಿಲ್ಲ ಎಂದು ಹೇಳಿದ ರಾಜ್ಯ ಕಾಂಗ್ರೆಸ್ ವಕ್ತಾರ ಧನಂಜಯ ಸಿಂಗ್ ಠಾಕೂರ್ ಅವರು, ಕ್ರಿಮಿನಲ್‌ಗಳಿಗೆ ರಕ್ಷಣೆ ನೀಡುವುದು ಮತ್ತು ಅವರನ್ನು ಚುನಾವಣೆಗಳಲ್ಲಿ ನಿಲ್ಲಿಸುವುದು ಬಿಜೆಪಿಯ ಗುಣವಾಗಿದೆ ಎಂದು ಆರೋಪಿಸಿದರು.
‘ಸ್ವಚ್ಛ ಚಾರಿತ್ರ್ಯ’ಹೊಂದಿರುವ ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಬಿಜೆಪಿ ಸುಳ್ಳು ಆರೋಪಗಳನ್ನು ಹೊರಿಸುತ್ತಿದೆ ಎಂದ ಅವರು,ಚುನಾವಣಾ ಆಯೋಗವು ನಿಗದಿಪಡಿಸಿರುವ ಮಾನದಂಡವನ್ನು ನಾವು ಪಾಲಿಸುತ್ತೇವೆ ಎಂದರು.