ಎಲ್ಲೆಲ್ಲಿ ಗೋವಧೆ ನಡೆಯುತ್ತವೆಯೊ ಅಲ್ಲೆಲ್ಲ ಇಂತಹ ಘಟನೆ ನಡೆಯುತ್ತದೆ: ವಯನಾಡ್ ದುರಂತಕ್ಕೆ ಬಿಜೆಪಿ ನಾಯಕನ ವಿವಾದಾತ್ಮಕ ಪ್ರತಿಕ್ರಿಯೆ
ಹೊಸದಿಲ್ಲಿ: ಕೇರಳದಲ್ಲಿರುವ ಗೋವಧೆ ಪರಿಪಾಠದಿಂದಾಗಿಯೇ ವಯನಾಡ್ ಭೂಕುಸಿತ ಸಂಭವಿಸಿದೆ ಎಂಬ ವಿವಾದಾತ್ಮಕ ಹೇಳಿಕೆಯನ್ನು ಶನಿವಾರ ಬಿಜೆಪಿಯ ಹಿರಿಯ ನಾಯಕ ಜ್ಞಾನ್ ದೇವ್ ಅಹುಜಾ ನೀಡಿದ್ದಾರೆ. ಎಲ್ಲೆಲ್ಲಿ ಗೋವಧೆಗಳು ನಡೆಯುತ್ತವೆಯೊ ಅಲ್ಲೆಲ್ಲ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ ಎಂದೂ ರಾಜಸ್ಥಾನದ ಮಾಜಿ ಶಾಸಕರಾದ ಜ್ಞಾನ್ ದೇವ್ ಅಹುಜಾ ಹೇಳಿದ್ದಾರೆ.
ವಯನಾಡ್ ಭೂಕುಸಿತವು ಗೋವಧೆಯ ನೇರ ಪರಿಣಾಮವಾಗಿದ್ದು, ಕೇರಳದಲ್ಲಿ ಈ ಅಭ್ಯಾವ ನಿಲ್ಲುವವರೆಗೂ ಇಂತಹ ದುರಂತಗಳು ಸಂಭವಿಸುತ್ತಲೇ ಇರುತ್ತವೆ ಎಂದು ಅಹುಜಾ ಅಭಿಪ್ರಾಯ ಪಟ್ಟಿದ್ದಾರೆ. ಉತ್ತರಾಖಂಡ ಹಾಗೂ ಹಿಮಾಚಲ ಪ್ರದೇಶದಂಥ ಪ್ರಾಂತ್ಯಗಳಲ್ಲಿ ಮೇಘ ಸ್ಫೋಟಗಳು ಹಾಗೂ ಭೂಕುಸಿತಗಳು ಪದೇ ಪದೇ ನಡೆಯುತ್ತಿದ್ದರೂ, ಅವು ಇಷ್ಟು ದೊಡ್ಡ ಪ್ರಮಾಣದ ವಿಪತ್ತಿನ ಸ್ವರೂಪ ಪಡೆದುಕೊಂಡಿಲ್ಲ ಎಂಬುದರತ್ತ ಅವರು ಬೊಟ್ಟು ಮಾಡಿದ್ದಾರೆ.
“2018ರಿಂದ ಗೋವಧೆಯಲ್ಲಿ ಭಾಗಿಯಾಗಿರುವ ಪ್ರದೇಶಗಳು ಇಂತಹ ದುರಂತ ಘಟನೆಗಳನ್ನು ಎದುರಿಸುತ್ತಿರುವುದನ್ನು ನೋಡುತ್ತಿದ್ದೇವೆ. ಒಂದು ವೇಳೆ ಗೋವಧೆ ಸ್ಥಗಿತಗೊಳ್ಳದಿದ್ದರೆ, ಕೇರಳದಲ್ಲಿ ಇಂತಹ ದುರಂತಗಳು ಮುಂದುವರಿಯಲಿವೆ” ಎಂದು ಅಹುಜಾ ಎಚ್ಚರಿಸಿದ್ದಾರೆ.
ಜುಲೈ 30ರಂದು ಸಂಭವಿಸಿದ ವಯನಾಡ್ ಭೂಕುಸಿತ ದುರಂತದಲ್ಲಿ ಚೂರಲ್ ಮಲ, ಮುಂಡಕ್ಕೈ ಹಾಗೂ ಮೆಪ್ಪಾಡಿಯಂಥ ಗ್ರಾಮಗಳು ಸಂಪೂರ್ಣವಾಗಿ ಕೊಚ್ಚಿ ಹೋಗಿವೆ. ಇದುವರೆಗೆ ಈ ದುರಂತದಲ್ಲಿ 300 ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, 1,300ಕ್ಕೂ ಹೆಚ್ಚು ರಕ್ಷಣಾ ಕಾರ್ಯಕರ್ತರು ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ.