ಮಾಯಾವತಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಶಾಸಕ ರಾಜೇಶ್ ಚೌಧರಿ
ಲಕ್ನೊ: ಇತ್ತೀಚೆಗೆ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ವಿರುದ್ಧ ಬಿಜೆಪಿ ಶಾಸಕ ರಾಜೇಶ್ ಚೌಧರಿ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಈ ಹೇಳಿಕೆಯ ವಿರುದ್ಧ ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿ ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ.
ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ನಡೆದಿದ್ದ ಚರ್ಚೆಯಲ್ಲಿ ಪಾಲ್ಗೊಂಡಿದ್ದ ರಾಜೇಶ್ ಚೌಧರಿ, ಮಾಯಾವತಿ ಬಿಜೆಪಿಯ ಬೆಂಬಲದೊಂದಿಗೆ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದು ಬಿಜೆಪಿಯ ತಪ್ಪು ನಿರ್ಧಾರದಿಂದ ಎಂದು ಹೇಳಿದ್ದರು.
ಮುಂದುವರಿದು, ಮಾಯಾವತಿ ಉತ್ತರ ಪ್ರದೇಶದ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ ಎಂದೂ ಮಥುರಾ ಜಿಲ್ಲೆಯ ಮಂತ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಚೌಧರಿ ಆರೋಪಿಸಿದ್ದರು. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದ ಈ ವಿಡಿಯೊ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಚೌಧರಿ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಅಖಿಲೇಶ್ ಯಾದವ್, ಅವರ ಹೇಳಿಕೆಯನ್ನು ಬಲವಾಗಿ ಖಂಡಿಸಿದ್ದಾರೆ. “ರಾಜಕೀಯ ಭಿನ್ನಾಭಿಪ್ರಾಯಗಳಿಗೆ ತಮ್ಮದೇ ಆದ ಸ್ಥಾನವಿದೆ. ಆದರೆ, ಯಾರೂ ಕೂಡಾ ವೈಯಕ್ತಿಕ ದಾಳಿಯಲ್ಲಿ ಪಾಲ್ಗೊಳ್ಳಬಾರದು” ಎಂದು ಟೀಕಿಸಿದ್ದರು. ಅಲ್ಲದೆ ಬಿಜೆಪಿ ಶಾಸಕರ ಹೇಳಿಕೆ ತೀವ್ರ ಆಕ್ಷೇಪಾರ್ಹವಾಗಿದ್ದು, ಅವರ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಬಿಜೆಪಿಯ ಮಹಿಳೆಯರ ಬಗ್ಗೆ ಆಳವಾದ ಕಹಿಯನ್ನು ಹೊಂದಿದ್ದು, ನಿರ್ದಿಷ್ಟವಾಗಿ ಅಂಚಿನ ಸಮುದಾಯಗಳ ಮಹಿಳೆಯರ ವಿರುದ್ಧ ಅಸಹನೆ ಹೊಂದಿದೆ. ಒಂದು ವೇಳೆ ಬಿಜೆಪಿಯೇನಾದರೂ ರಾಜೇಶ್ ಚೌಧರಿಯ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳದಿದ್ದರೆ, ಅವರ ಹೇಳಿಕೆಯು ಆ ಪಕ್ಷದ ನಿಲುವನ್ನು ಪ್ರತಿಫಲಿಸಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ಅಖಿಲೇಶ್ ಯಾದವ್ ಅವರ ಬೆಂಬಲಕ್ಕೆ ಧನ್ಯವಾದ ಸಲ್ಲಿಸಿರುವ ಮಾಯಾವತಿ, ತಮ್ಮ ಪಕ್ಷದಲ್ಲೇ ರಾಜೇಶ್ ಚೌಧರಿಗೆ ಗೌರವದ ಕೊರತೆ ಇರುವುದರಿಂದ, ಗಮನ ಸೆಳೆಯುವ ಪ್ರಯತ್ನದ ಭಾಗವಾಗಿ ಅವರು ಇಂತಹ ಹೇಳಿಕೆ ನೀಡಿದ್ದಾರೆ. ಚೌಧರಿಯ ವಿರುದ್ಧ ಬಿಜೆಪಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅವರು ಹಾಗೆ ಮಾಡಲು ವಿಫಲವಾದರೆ, ಅದನ್ನು ಪಕ್ಷದೊಳಗಿನ ಭಾರಿ ಪಿತೂರಿ ಎಂದೇ ಭಾವಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ವಿಷಯದ ಕುರಿತು ಬಿಜೆಪಿಯೇನಾದರೂ ಕ್ರಮ ಕೈಗೊಳ್ಳದಿದ್ದರೆ, ಮುಂಬರುವ ವಿಧಾನಸಭಾ ಚುನಾವಣೆ ಹಾಗೂ ಉಪ ಚುನಾವಣೆಗಳಲ್ಲಿ ಸಾರ್ವಜನಿಕರು ತಕ್ಕ ಉತ್ತರ ನೀಡಲಿದ್ದಾರೆ ಎಂದೂ ಅವರು ಎಚ್ಚರಿಸಿದ್ದಾರೆ.