ಬಿಜೆಪಿ ನನ್ನ ವಿರುದ್ಧ ಸುಳ್ಳುಗಳನ್ನು ಹರಡುತ್ತಿದೆ : ರಾಹುಲ್ ಗಾಂಧಿ
ಹೊಸದಿಲ್ಲಿ : ರಾಹುಲ್ ಗಾಂಧಿ ಧಾರ್ಮಿಕ ಸ್ವಾತಂತ್ರ್ಯದ ಕುರಿತು ಮಾತನಾಡುವಾಗ ಸಿಖ್ಖರ ಬಗ್ಗೆ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ದಾಳಿ ನಡೆಸುತ್ತಿರುವ ಬೆನ್ನಿಗೇ, "ಬಿಜೆಪಿಗೆ ಸತ್ಯವನ್ನು ಸಹಿಸಲು ಸಾಧ್ಯವಿಲ್ಲದೆ ಇರುವುದರಿಂದ, ಅದು ಸುಳ್ಳಿನ ಮೊರೆ ಹೋಗಿದೆ" ಎಂದು ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ.
"ಅಮೆರಿಕದಲ್ಲಿನ ನನ್ನ ಹೇಳಿಕೆಯ ಕುರಿತು ಬಿಜೆಪಿ ಸುಳ್ಳು ಹರಡುತ್ತಿದೆ. ಭಾರತ ಮತ್ತು ವಿದೇಶಗಳಲ್ಲಿರುವ ಪ್ರತಿಯೊಬ್ಬ ಸಿಖ್ ಸಹೋದರ ಮತ್ತು ಸಹೋದರಿಯನ್ನು ಒಂದು ಮಾತು ಕೇಳಲು ಬಯಸುತ್ತೇನೆ - ನಾನು ಹೇಳಿರುವುದರಲ್ಲಿ ಏನಾದರೂ ತಪ್ಪಿದೆಯೆ? ಭಾರತವು ಪ್ರತಿ ಸಿಖ್ ಮತ್ತು ಪ್ರತಿ ಭಾರತೀಯ ತನ್ನ ಧರ್ಮವನ್ನು ಆಚರಿಸುವ ಸ್ವಾತಂತ್ರ್ಯವಿರುವ ದೇಶವಾಗಿರಬಾರದೆ?" ಎಂದು ಅವರು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ನೊಂದಿಗೆ ತಾವು ವಾಷಿಂಗ್ಟನ್‌ನಲ್ಲಿ ನೀಡಿರುವ ಹೇಳಿಕೆಯ ವಿಡಿಯೊವನ್ನೂ ರಾಹುಲ್ ಗಾಂಧಿ ಹಂಚಿಕೊಂಡಿದ್ದಾರೆ.
"ಎಂದಿನಂತೆ ಬಿಜೆಪಿಗೆ ಸತ್ಯದ ಪರ ನಿಲ್ಲಲು ಸಾಧ್ಯವಿಲ್ಲದೆ ಇರುವುದರಿಂದ ಸುಳ್ಳಿನ ಮೊರೆ ಹೋಗಿದೆ. ಆದರೆ ನಾನು ಭಾರತವನ್ನು ವ್ಯಾಖ್ಯಾನಿಸುವ ವೈವಿಧ್ಯತೆಯಲ್ಲಿ ಏಕತೆ, ಸಮಾನತೆ ಹಾಗೂ ಪ್ರೀತಿಯೆಂಬ ಮೌಲ್ಯಗಳ ಕುರಿತೇ ಎಂದಿಗೂ ಮಾತನಾಡುತ್ತೇನೆ" ಎಂದು ಹೇಳಿದ್ದಾರೆ.
ಅಮೆರಿಕದಲ್ಲಿ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಯ ವಿರುದ್ಧ ಬಿಜೆಪಿಯ ನಾಯಕರು ಮುಗಿ ಬಿದ್ದಿದ್ದಾರೆ. ಈ ಪೈಕಿ ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು, ಉತ್ತರ ಪ್ರದೇಶ ಸಚಿವ ರಘುರಾಜ್ ಸಿಂಗ್ ಹಾಗೂ ಬಿಜೆಪಿ ಮಿತ್ರ ಪಕ್ಷ ಶಿವಸೇನೆಯ ಸಂಜಯ್ ಗಾಯಕ್ವಾಡ್ ಸೇರಿದ್ದಾರೆ.