ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ ಎಲ್ಲಾ 6 ಮಾಜಿ ಕೈ ಶಾಸಕರಿಗೆ ಬಿಜೆಪಿ ಟಿಕೆಟ್

Update: 2024-03-26 16:48 GMT

ಸಾಂದರ್ಭಿಕ ಚಿತ್ರ

ಶಿಮ್ಲಾ: ಹಿಮಾಚಲಪ್ರದೇಶದಲ್ಲಿ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವು ತನ್ನ ಅಭ್ಯಥಿಗಳನ್ನು ಇನ್ನಷ್ಟೇ ನಿರ್ಧರಿಸಬೇಕಾಗಿದೆಯಾದರೂ ಬಿಜೆಪಿಯು ಈ ವಿಷಯದಲ್ಲಿ ಒಂದು ಹೆಜ್ಜೆ ಮುಂದಿದ್ದು, ಲೋಕಸಭಾ ಚುನಾವಣೆಯ ಜೊತೆಗೆ ಹಿಮಾಚಲ ಪ್ರದೇಶದ ವಿಧಾನಸಭೆಯ ಉಪಚುನಾವಣೆಗಳಿಗೂ ತನ್ನ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ.

ಫೆಬ್ರವರಿ 27ರ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಅಡ್ಡ ಮತದಾನ ಮಾಡಿದ್ದ ಎಲ್ಲಾ ಆರು ಮಾಜಿ ಕಾಂಗ್ರೆಸ್ ಶಾಸಕರನ್ನು ವಿಧಾನಸಭಾ ಉಪಚುನಾವಣೆಗಳಿಗೆ ತನ್ನ ಅಧಿಕೃತ ಅಭ್ಯರ್ಥಿಗಳೆಂದು ಬಿಜೆಪಿ ಘೋಷಿಸಿದೆ.

ಹಿಮಾಚಲ ಪ್ರದೇಶದ ನಾಲ್ಕು ಲೋಕಸಭಾ ಕ್ಷೇತ್ರಗಳಿಗೆ ಜೂನ್ 1ರಂದು ಮತದಾನ ನಡೆಯಲಿದ್ದು, ಆ ದಿನವೇ ಆರು ವಿಧಾನಸಭಾ ಕ್ಷೇತ್ರಗಳಿಗೂ ಉಪಚುನಾವಣೆ ನಡೆಯಲಿದೆ. ಹಿಮಾಚಲಪ್ರದೇಶ ವಿಧಾನಸಭೆಯಿಂದ ಆರು ಮಂದಿ ಕಾಂಗ್ರೆಸ್ ಶಾಸಕರನ್ನು ಅನರ್ಹಗೊಳಿಸಿದ್ದರಿಂದ ತೆರವಾದ ಸ್ಥಾನಕ್ಕೆ ಚುನಾವಣೆಗಳು ನಡೆಯಲಿವೆ.

ಕಾಂಗ್ರೆಸ್ ನ ಬಂಡಾಯ ಶಾಸಕರಾದ ರಾಜೀಂದರ್ ರಾಣಾ, ಸುಧೀರ್ ಶರ್ಮಾ, ಇಂದರ್ ದತ್ ಲಖನ್ಪಾಲ್, ರವಿಠಾಕೂರ್, ಚೈತನ್ಯ ಶರ್ಮಾ ಹಾಗೂ ದವೀಂದರ್ ಭುಟ್ಟೊ ಅವರು ಕಳೆದ ವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಅವರನ್ನು ಸುಜಾನ್ಪುರ, ಧರ್ಮಶಾಲಾ, ಬರ್ಸಾರ್, ಲಾಹೌಲ್-ಸ್ಪಿಟಿ, ಗಾಗ್ರೆಟ್ ಹಾಗೂ ಕುಟ್ಲೆಹಾರ್ ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳಾಗಿ ಹೆಸರಿಸಲಾಗಿದೆ. 2022ರ ವಿಧಾನಸಭಾ ಚುನಾವಣೆಯಲ್ಲಿ ಅವರೆಲ್ಲರೂ ಇದೇ ಕ್ಷೇತ್ರಗಳಿಂದ ಆಯ್ಕೆಯಾಗಿದ್ದರು.

ಈ ಬಂಡಾಯ ಶಾಸಕರು ಸಚೇತಕಾಜ್ಞೆಯನ್ನು ಉಲ್ಲಂಘಿಸಿ ರಾಜ್ಯ ಬಜೆಟ್ ಹಾಗೂ ವಿತ್ತೀಯ ವಿಧೇಯಕವನ್ನು ವಿಧಾನಸಭೆಯಲ್ಲಿ ಮತಕ್ಕೆ ಹಾಕಿದ ಸಂದರ್ಭದಲ್ಲಿ ಸದನಕ್ಕೆ ಗೈರುಹಾಜರಾದ ಬಳಿಕ ಅವರನ್ನು ಸ್ಪೀಕರ್ ಅವರು ವಿಧಾನಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News