ರಾಮ ಮಂದಿರದ ಹೆಸರಲ್ಲಿ ಬಿಜೆಪಿಗೆ ಒಂದೇ ಒಂದು ಮತ ಸಿಗಲ್ಲ: ಪ್ರಶಾಂತ್ ಕಿಶೋರ್
ಹೊಸದಿಲ್ಲಿ: ಮೋದಿ ವಿಪಕ್ಷಗಳಿಂದ ಸವಾಲು ಎದುರಿಸದೇ ಇರಬಹುದು, ಆದರೆ ಈ ದೇಶದ ಜನರ ಆಕ್ರೋಶ ಖಂಡಿತ ಎದುರಿಸಬೇಕಾಗುತ್ತೆ ಎಂದು ಒಂದು ಕಾಲದ ಮೋದಿ ಗೆಲುವಿನ ಹಿಂದಿನ ರಣತಂತ್ರಗಾರ, ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಅಂದ್ರ ಪ್ರದೇಶದ ಆರ್ ಟಿ ವಿ ಗೆ ನೀಡಿರುವ ಸಂದರ್ಶನದಲ್ಲಿ ಪ್ರಶಾಂತ್ ಕಿಶೋರ್ ಈ ಮಾತು ಹೇಳಿದ್ದಾರೆ.
ಈ ಹಿಂದೆ ರಾಮ ಮಂದಿರದ ಹೆಸರಲ್ಲಿ ಬಿಜೆಪಿಗೆ ಮತ ನೀಡದ ಆದರೆ ಈಗ ಅದೇ ಹೆಸರಲ್ಲಿ ಬಿಜೆಪಿಗೆ ಮತ ನೀಡಲು ಬಯಸುವ ಒಬ್ಬೇ ಒಬ್ಬ ಮತದಾರ ನನಗೆ ಸಿಕ್ಕಿಲ್ಲ. ಹಾಗಾಗಿ ರಾಮ ಮಂದಿರದ ಹೆಸರಲ್ಲಿ ಈ ಬಾರಿ ಬಿಜೆಪಿಗೆ ಒಂದೇ ಒಂದು ಹೆಚ್ಚುವರಿ ಮತ ಸಿಗೋದಿಲ್ಲ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಬ್ರಾಂಡ್ ಮೋದಿಯನ್ನು ಸೋಲಿಸಲಾಗದು ಎಂಬ ಭಾವನೆ ಈ ಚುನಾವಣೆಯಲ್ಲಿ ಕರಗಿ ಹೋಗಿದೆ. ಮೋದಿಗೆ ಸವಾಲು ಹಾಕಲು ಅಸಾಧ್ಯ ಎಂಬ ವಾತಾವರಣ ಈಗಿಲ್ಲ. ಒಂದು ಪಕ್ಷ ಅಥವಾ ಒಂದು ನಾಯಕ ಅಲ್ಲ, ಈ ದೇಶದ ಜನರೇ ಮೋದಿಗೆ ಸವಾಲು ಹಾಕುತ್ತಿದ್ದಾರೆ. ವಿಪಕ್ಷ ದುರ್ಬಲ ಇರಬಹುದು ಆದರೆ ಜನರ ವಿರೋಧ ದುರ್ಬಲವಾಗಿಲ್ಲ, 60 ಕೋಟಿಗಿಂತ ಹೆಚ್ಚು ಜನರು ದಿನಕ್ಕೆ ನೂರು ರೂಪಾಯಿ ಕೂಡ ಸಂಪಾದನೆ ಮಾಡದ ದೇಶದಲ್ಲಿ ಸರಕಾರಕ್ಕೆ ಜನರ ವಿರೋಧ ದುರ್ಬಲವಾಗಿರಲಿದೆ ಎಂದು ಯೋಚಿಸುವ ತಪ್ಪು ಮಾಡಲೇಬೇಡಿ ಎಂದು ಅವರು ಹೇಳಿದ್ದಾರೆ.
ಇಲ್ಲಿ ಯಾರೂ 50% ಮತ ಪಡೆಯೋದಿಲ್ಲ. ನೂರು ಜನರಲ್ಲಿ ಕೇವಲ 40 ಮಂದಿ ಮೋದಿಗೆ ಮತ ಹಾಕುತ್ತಾರೆ. ಮೋದಿಯ ಸಿದ್ಧಾಂತ, ಅವರ ಕೆಲಸ, ಅವರ ಹಿಂದುತ್ವ, ರಾಮ ಮಂದಿರ , 370 ನೇ ವಿಧಿ ರದ್ದತಿ - ಇವೆಲ್ಲವನ್ನೂ ಸೇರಿಸಿ ಮತ ಹಾಕುವವರು ಅದೇ ನಲ್ವತ್ತು ಮಂದಿ. ಅಂದ್ರೆ 60-62 ಜನರಿಗೆ ಸಮಾಧಾನ ಇಲ್ಲ. ಈ ಚುನಾವಣೆಯಲ್ಲಿ ಮೋದಿ ಹಾಗು ಬಿಜೆಪಿ ಎದುರು ದೊಡ್ಡ ಸವಾಲಿದೆ. ಗ್ರಾಮೀಣ ಜನರ ಸಂಕಷ್ಟ ಈಗ ದೊಡ್ಡ ವಿಷಯವಾಗಿದೆ. ಇಷ್ಟೆಲ್ಲ ಆಗಿಯೂ ಬಿಜೆಪಿ ಗೆದ್ದರೆ ಅದರರ್ಥ ಇಲ್ಲಿ ವಿಪಕ್ಷಗಳು ಸಾಕಷ್ಟು ಸಮರ್ಥವಾಗಿಲ್ಲ ಎಂದು. ಹಾಗಂತ ಇಡೀ ದೇಶ ಮೋದಿ ಬಗ್ಗೆ ಖುಷಿಯಾಗಿದೆ ಅಂತಲ್ಲ ಎಂದು ಕಿಶೋರ್ ಹೇಳಿದ್ದಾರೆ.
ಬ್ರಾಂಡ್ ಮೋದಿ ಬಗ್ಗೆ ಮಾತಾಡಿರುವ ಪ್ರಶಾಂತ್ ಕಿಶೋರ್, 2014 ಕ್ಕೆ ಹೋಲಿಸಿದರೆ ಈಗ ಅದು ದುರ್ಬಲವಾಗಿದೆ. ಈಗ ಬೇರೆ ಯಾರಿಗೆ ಮತ ಹಾಕೋದು ಎಂಬ ಯೋಚನೆಯಲ್ಲಿ ಜನರಿದ್ದಾರೆ. ಅವರಿಗೆ ಬ್ರ್ಯಾಂಡ್ ಮೋದಿ ದುರ್ಬಲವಾಗಿ ಕಾಣುತ್ತಿದೆ. 2014 ರಲ್ಲಿ ಬಿಜೆಪಿ ಬೆಂಬಲಿಗ ಮತದಾರರಲ್ಲಿ ಭಾರೀ ಉತ್ಸಾಹವಿತ್ತು, 2019 ರಲ್ಲಿ ದೇಶದ ಅಭಿವೃದ್ಧಿ ಮಾಡಲು ಬಿಜೆಪಿಗೆ ಇನ್ನೊಂದು ಅವಧಿ ಸಿಗಬೇಕು ಎಂಬ ಭಾವನೆ ಇತ್ತು. ಮೋದಿ ಬಂದು ಬಿಟ್ಟರೆ ದೇಶ ಉದ್ದಾರ ಆಗಿಬಿಡುತ್ತದೆ ಎಂಬ ಭಾವನೆ 2014 ರಲ್ಲಿ ದೊಡ್ಡ ಸಂಖ್ಯೆಯ ಜನರಲ್ಲಿತ್ತು. ಆದರೆ ಈಗ ಹಾಗಿಲ್ಲ. ಬೇರೆ ಯಾರೂ ಇಲ್ಲ, ಏನು ಮಾಡೋದು, ಇವರಿಗೆ ಕೊಡಬೇಕಾಗುತ್ತೆ ಎಂಬ ಭಾವನೆ ಬಂದಿದೆ. ಜನರ ಉತ್ಸಾಹ ಸಂಪೂರ್ಣ ಇಳಿದು ಹೋಗಿದೆ ಎಂದಿದ್ದಾರೆ.
2014 ಮತ್ತು 2019ರ ನಡುವೆ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಎಲ್ಲ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ 3% ಕಡಿಮೆ ಮತ ಪಡೆಯುತ್ತಿತ್ತು. ಆದರೆ 2019 ಮತ್ತು 2024ರ ನಡುವೆ ಈ ಅಂತರ 9 ರಿಂದ 10 % ಕ್ಕೆ ಏರಿದೆ ಎನ್ನುತ್ತಾರೆ ಪ್ರಶಾಂತ್ ಕಿಶೋರ್