ಚುನಾವಣೆಗೂ ಮೊದಲೇ ಖಾತೆ ತೆರೆದ ಬಿಜೆಪಿ: ಸೂರತ್‌ ಬಿಜೆಪಿ ಅಭ್ಯರ್ಥಿ ಮುಕೇಶ್‌ ದಲಾಲ್‌ ಅವಿರೋಧ ಆಯ್ಕೆ

Update: 2024-04-22 11:37 GMT

Screengrab:X/@ANI

ಹೊಸದಿಲ್ಲಿ: ಗುಜರಾತ್‌ನ ಸೂರತ್‌ ಕ್ಷೇತ್ರದಿಂದ ಬಿಜೆಪಿಯ ಮುಕೇಶ್‌ ದಲಾಲ್‌ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಅಧಿಕೃತವಾಗಿ ಘೋಷಿಸಲಾಗಿದೆ.

ಅವರಿಗೆ ಚುನಾವಣಾಧಿಕಾರಿಗಳು ವಿಜೇತರ ಪ್ರಮಾಣಪತ್ರ ನೀಡಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ ನಿಲೇಶ್‌ ಕುಂಭಾನಿ ಅವರ ನಾಮಪತ್ರವನ್ನು ಚುನಾವಣಾಧಿಕಾರಿಗಳು ತಿರಸ್ಕರಿಸಿದ್ದರೆ ಉಳಿದ ಎಲ್ಲಾ ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿದಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳ ಹೊರತಾಗಿ ಬಹುಜನ ಸಮಾಜದ ಪ್ಯಾರೆಲಾಲ್‌ ಭಾರತಿ ಸಹಿತ ಎಂಟು ಮಂದಿ ಇತರ ಅಭ್ಯರ್ಥಿಗಳಿದ್ದರು. ಕಣದಿಂದ ಹಿಂದೆ ಸರಿದವರಲ್ಲಿ ಪ್ಯಾರೆಲಾಲ್‌ ಕೊನೆಯವರಾಗಿದ್ದರು.

ಸಾಕ್ಷಿಗಳಾಗಿ ಸಹಿ ಹಾಕಿದವರ ನಕಲಿ ಸಹಿಗಳ ಕುರಿತಂತೆ ರವಿವಾರ ಚುನಾವಣಾಧಿಕಾರಿ ಕಾಂಗ್ರೆಸ್‌ ಅಭ್ಯರ್ಥಿಯ ನಾಮಪತ್ರ ತಿರಸ್ಕರಿಸಿದ್ದರು.

ಅವಿರೋಧವಾಗಿ ಆಯ್ಕೆಯಾದ ಬಿಜೆಪಿಯ ಮುಕೇಶ್‌ ದಲಾಲ್‌ ಪ್ರತಿಕ್ರಿಯಿಸಿ, “ಇಂದು ನನ್ನನ್ನು ವಿಜೇತನನ್ನಾಗಿ ಘೋಷಿಸಲಾಗಿದೆ. ಗುಜರಾತ್‌ನಲ್ಲಿ ಹಾಗೂ ದೇಶದಲ್ಲಿ ಮೊದಲ ತಾವರೆ ಅರಳಿದೆ. ನಾನು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಶಾ, ಪಕ್ಷದ ಅಧ್ಯಕ್ಷ ಜೆ ಪಿ ನಡ್ಡಾ, ರಾಜ್ಯದ ಸಿಎಂ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರಿಗೆ ನನ್ನ ಮೇಲೆ ವಿಶ್ವಾಸ ಇರಿಸಿದ್ದಕ್ಕೆ ಧನ್ಯವಾದ ತಿಳಿಸುತ್ತೇನೆ. ಸಂಪೂರ್ಣ ಬಹುಮತದ ಸರ್ಕಾರ ರಚನೆಯತ್ತ ಇದು ಮೊದಲ ಹೆಜ್ಜೆಯಾಗಿದೆ,” ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News