ಪ್ರಯಾಣಿಕನಿಂದ ಬಾಂಬ್ ಬೆದರಿಕೆ: ಮುಂಬೈನಲ್ಲಿ ತುರ್ತು ಭೂಸ್ಪರ್ಶ ಮಾಡಿದ ಆಕಾಶ ಏರ್‌ಲೈನ್ಸ್ ವಿಮಾನ
Update: 2023-10-21 14:26 GMT
ಮುಂಬೈ: 185 ಪ್ರಯಾಣಿಕರನ್ನು ಹೊತ್ತು ಪುಣೆಯಿಂದ ದಿಲ್ಲಿಗೆ ಸಾಗುತ್ತಿದ್ದ ಆಕಾಶ ಏರ್‌ಲೈನ್ಸ್‌ನ ವಿಮಾನವು ಪ್ರಯಾಣಿಕನೋರ್ವ ತನ್ನ ಬ್ಯಾಗ್‌ನಲ್ಲಿ ಬಾಂಬ್ ಇದೆಯೆಂದು ಹೇಳಿದ ಬಳಿಕ ಶನಿವಾರ ನಸುಕಿನ 12:42 ಗಂಟೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ಸ್ಥಳಕ್ಕೆ ಧಾವಿಸಿದ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳಗಳ ತಂಡಗಳು ವಿಮಾನದಲ್ಲಿ ಪ್ರಯಾಣಿಕನ ಬ್ಯಾಗ್ ಪರಿಶೀಲಿಸಿದಾಗ ಯಾವುದೇ ಸ್ಪೋಟಕ ವಸ್ತು ಪತ್ತೆಯಾಗಿಲ್ಲ.
185 ಪ್ರಯಾಣಿಕರು ಮತ್ತು ಆರು ಸಿಬ್ಬಂದಿಗಳಿದ್ದ ವಿಮಾನವು ಶನಿವಾರ ನಸುಕಿನ 12:07 ಗಂಟೆಗೆ ಪುಣೆಯಿಂದ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಪ್ರಯಾಣಿಕನೋರ್ವ ತನ್ನ ಬ್ಯಾಗ್‌ನಲ್ಲಿ ಬಾಂಬ್ ಇದೆ ಎಂದು ಬೆದರಿಸಿದ್ದ. ತಕ್ಷಣ ವಿಮಾನವನ್ನು ಮುಂಬೈಗೆ ತಿರುಗಿಸಲಾಗಿದ್ದು, 12:42ಕ್ಕೆ ಅದು ಛತ್ರಪತಿ ಶಿವಾಜಿ ಮಹಾರಾಜ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿದೆ ಎಂದು ಆಕಾಶ ಏರ್‌ಲೈನ್ಸ್ ಹೇಳಿಕೆಯಲ್ಲಿ ತಿಳಿಸಿದೆ.