ಮಹಾರಾಷ್ಟ್ರ ಬಂದ್ ಗೆ ಕರೆ ನೀಡದಂತೆ ಎಲ್ಲ ರಾಜಕೀಯ ಪಕ್ಷಗಳಿಗೆ ನಿರ್ಬಂಧ ಹೇರಿದ ಬಾಂಬೆ ಹೈಕೋರ್ಟ್
ಮುಂಬೈ: ಮಹಾರಾಷ್ಟ್ರ ಬಂದ್ ಗೆ ಕರೆ ನೀಡದಂತೆ ಎಲ್ಲ ರಾಜಕೀಯ ಪಕ್ಷಗಳಿಗೆ ಶುಕ್ರವಾರ ಬಾಂಬೆ ಹೈಕೋರ್ಟ್ ನಿರ್ಬಂಧ ಹೇರಿದೆ.
ಮಹಾರಾಷ್ಟ್ರ ಬಂದ್ ಗೆ ಕರೆ ನೀಡುವುದರ ವಿರುದ್ಧ ಎಲ್ಲ ರಾಜಕೀಯ ಪಕ್ಷಗಳಿಗೆ ನಿರ್ಬಂಧ ಹೇರಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ನೇತೃತ್ವದ ಪೀಠವು ಮೌಖಿಕವಾಗಿ ಹೇಳಿತು.
ಥಾಣೆ ಜಿಲ್ಲೆಯ ಬದ್ಲಾಪುರ್ ನ ಶಾಲೆಯೊಂದರಲ್ಲಿ ಇಬ್ಬರು ಬಾಲಕಿಯರ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯವನ್ನು ವಿರೋಧಿಸಿ ವಿರೋಧ ಪಕ್ಷಗಳ ಮೈತ್ರಿಕೂಟ ಮಹಾವಿಕಾಸ್ ಅಘಾಡಿ ಆಗಸ್ಟ್ 24ರಂದು ಮಹಾರಾಷ್ಟ್ರ ಬಂದ್ ಗೆ ಕರೆ ನೀಡಿದ್ದ ಬೆನ್ನಿಗೇ ನ್ಯಾಯಾಲಯದಿಂದ ಈ ಸೂಚನೆ ಹೊರ ಬಿದ್ದಿದೆ.
ಬದ್ಲಾಪುರ್ ನಲ್ಲಿನ ಕಿಂಡರ್ ಗಾರ್ಟನ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಯನ್ನು ಆಗಸ್ಟ್ 17ರಂದು ಪೊಲೀಸರು ಬಂಧಿಸಿದ್ದರು. ದೂರಿನ ಪ್ರಕಾರ, ಆರೋಪಿಯು ಸಂತ್ರಸ್ತ ಬಾಲಕಿಯರ ಮೇಲೆ ಶಾಲೆಯ ಶೌಚಾಲಯದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ಹೇಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರು ಈ ಸಂಬಂಧ ದೂರು ಸ್ವೀಕರಿಸುವುದಕ್ಕೂ ಮುನ್ನ, ಸಂತ್ರಸ್ತ ಬಾಲಕಿಯರ ಪೋಷಕರು 11 ಗಂಟೆ ಕಾಲ ಬದ್ಲಾಪುರ್ ಪೊಲೀಸ್ ಠಾಣೆಯ ಬಳಿ ಕಾಯುವಂತೆ ಮಾಡಲಾಗಿತ್ತು ಎಂದು ವಿರೋಧ ಪಕ್ಷಗಳು ಆರೋಪಿಸಿವೆ.
ಈ ಘಟನೆಯನ್ನು ಖಂಡಿಸಿ ಸಾವಿರಾರು ಪ್ರತಿಭಟನಾಕಾರರು ಬದ್ಲಾಪುರ್ ನಿಲ್ದಾಣದ ಬಳಿಯ ರೈಲ್ವೆ ಹಳಿಗಳನ್ನು ಬಂದ್ ಮಾಡಿದ್ದರು ಹಾಗೂ ಶಾಲೆಯೊಳಗೆ ನುಗ್ಗಿದ್ದರು.