"ಮಹಾರಾಷ್ಟ್ರದ ಜನ ಇದನ್ನೆಲ್ಲ ಇಷ್ಟಪಡುವುದಿಲ್ಲ": ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಹೇಳಿಕೆಗೆ NCP ಮುಖ್ಯಸ್ಥ ಅಜಿತ್ ಪವಾರ್ ಅಸಮ್ಮತಿ
ಪುಣೆ: ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಮಹಾರಾಷ್ಟ್ರದ ಚುನಾವಣಾ ರ್ಯಾಲಿಯಲ್ಲಿ "batenge to katenge" (ವಿಭಜನೆಯಾದ್ರೆ, ನಮ್ಮನ್ನು ಮುಗಿಸ್ತಾರೆ) ಎಂಬ ಘೋಷಣೆಯನ್ನು ಪುನರುಚ್ಚರಿಸಿದ ಕಾರಣ ಬಿಜೆಪಿ ಮಿತ್ರ ಪಕ್ಷ ಎನ್ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಗುರುವಾರ ಇಂತಹ ಹೇಳಿಕೆಗಳನ್ನು ರಾಜ್ಯದ ಜನರು ಮೆಚ್ಚುವುದಿಲ್ಲ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ಜನರು ಯಾವಾಗಲೂ ಕೋಮು ಸೌಹಾರ್ದತೆ ಕಾಪಾಡಲು ಶ್ರಮಿಸುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದ್ದು, ಮೈತ್ರಿ ಪಕ್ಷ ಬಿಜೆಪಿ ನಾಯಕನ ಹೇಳಿಕೆಗೆ ಬಹಿರಂಗವಾಗಿಯೇ ಅಸಮ್ಮತಿಯನ್ನು ಸೂಚಿಸಿದ್ದಾರೆ.
ಮಹಾರಾಷ್ಟ್ರವು ಛತ್ರಪತಿ ಶಿವಾಜಿ ಮಹಾರಾಜ್, ರಾಜರ್ಷಿ ಶಾಹು ಮಹಾರಾಜ್ ಮತ್ತು ಮಹಾತ್ಮ ಫುಲೆ ಅವರಿಗೆ ಸೇರಿದೆ. ನೀವು ಮಹಾರಾಷ್ಟ್ರವನ್ನು ಇತರ ರಾಜ್ಯಗಳೊಂದಿಗೆ ಹೋಲಿಕೆ ಮಾಡಬೇಡಿ, ಮಹಾರಾಷ್ಟ್ರದ ಜನರು ಇದನ್ನು ಇಷ್ಟಪಡುವುದಿಲ್ಲ. ಸಮಾಜದ ಎಲ್ಲಾ ವರ್ಗದ ಜನರನ್ನು ಜೊತೆಯಲ್ಲಿ ಕೊಂಡೊಯ್ಯುವುದು ಶಿವಾಜಿ ಮಹಾರಾಜರ ಆಶಯವಾಗಿದೆ ಎಂದು ಅಜಿತ್ ಪವಾರ್ ಹೇಳಿದ್ದಾರೆ.
ಬೇರೆ ರಾಜ್ಯಗಳ ಜನರು ಇಲ್ಲಿಗೆ ಬಂದಾಗ ಅವರು ಅಲ್ಲಿನ ಜನರನ್ನು ಗಮನದಲ್ಲಿಟ್ಟುಕೊಂಡು ಮಾತನಾಡುತ್ತಾರೆ. ಆದರೆ, ಮಹಾರಾಷ್ಟ್ರ ಅದನ್ನು ಎಂದಿಗೂ ಸ್ವೀಕರಿಸುವುದಿಲ್ಲ ಮತ್ತು ಇದು ಇಲ್ಲಿನ ಎಲ್ಲಾ ಚುನಾವಣೆಗಳ ಇತಿಹಾಸವಾಗಿದೆ ಎಂದು ಅಜಿತ್ ಪವಾರ್ ಹೇಳಿದ್ದಾರೆ.
ನವೆಂಬರ್ 20ರಂದು ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆ ಪೂರ್ವ ಮಹಾರಾಷ್ಟ್ರದ ವಾಶಿಮ್ ನಲ್ಲಿ ಪ್ರಚಾರ ಸಭೆಯಲ್ಲಿ ಆದಿತ್ಯನಾಥ್ ʼbatenge to katenge" ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು.