ಗಂಗಾ ಸ್ನಾನ ಮಾಡಿದರೆ ಬದುಕುಳಿಯಬಹುದೆಂದು ಕ್ಯಾನ್ಸರ್‌ ಪೀಡಿತ ಬಾಲಕನನ್ನು ನೀರಿಗಿಳಿಸಿ ಸಾವಿಗೆ ಕಾರಣರಾದ ಹೆತ್ತವರು

Update: 2024-01-25 10:43 GMT

Screengrab:X

ಡೆಹ್ರಾಡೂನ್:‌ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಐದು ವರ್ಷದ ಬಾಲಕನಿಗೆ ಗಂಗಾ ಸ್ನಾನ ಮಾಡಿಸಿದರೆ ಅತ ಗುಣಮುಖನಾಗಬಹುದೆಂದು ಆತನನ್ನು ಈ ಥರಗಟ್ಟುವ ಚಳಿಯಲ್ಲಿ ಗಂಗಾ ನದಿಯಲ್ಲಿ ಸ್ನಾನ ಮಾಡಿಸಿ ಆತನ ಸಾವಿಗೆ ಹೆತ್ತವರೇ ಕಾರಣರಾದ ಘಟನೆ ಉತ್ತರಾಖಂಡದ ಹರಿದ್ವಾರದಲ್ಲಿ ನಡೆದಿದೆ.

ದಿಲ್ಲಿ ಮೂಲದ ಕುಟುಂಬ ಬುಧವಾರ ಬೆಳಿಗ್ಗೆ 9 ಗಂಟೆಗೆ ಕ್ಯಾಬ್‌ನಲ್ಲಿ ಹರಿದ್ವಾರಕ್ಕೆ ತೆರಳಿತ್ತು. ಕ್ಯಾಬ್‌ ಚಾಲಕನ ಪ್ರಕಾರ ಬಾಲಕ ಮತ್ತು ಆತನ ಹೆತ್ತವರೊಂದಿಗೆ ಸಂಬಂಧಿಕಳೆಂದು ತಿಳಿಯಲಾದ ಮಹಿಳೆಯಿದ್ದರು. ಬಾಲಕನಿಗೆ ವಿಪರೀತ ಅಸೌಖ್ಯವಿತ್ತೆಂದೂ ಆತ ಹೇಳಿದ್ದು ಆತನಿಗೆ ಕ್ಯಾನ್ಸರ್‌ ಕಾಯಿಲೆಯಿದೆ ದಿಲ್ಲಿಯಲ್ಲಿ ವೈದ್ಯರು ಆತ ಬದುಕುಳಿಯುವ ಸಾಧ್ಯತೆಯಿಲ್ಲ ಎಂದಿದ್ದಾರೆಂದು ಚಾಲಕ ಹೇಳಿದ್ದಾನೆ.

ಬಾಲಕನ ಹೆತ್ತವರು ಏನೋ ಪ್ರಾರ್ಥನೆ ಮಾಡುತ್ತಾ ಬಾಲಕನನ್ನು ನೀರಿನಲ್ಲಿ ಮುಳುಗಿಸುತ್ತಿರುವುದನ್ನು ಹತ್ತಿರದಲ್ಲಿರುವವರು ನೋಡಿದ್ದರು. ಬಾಲಕ ತುಂಬಾ ಹೊತ್ತು ನೀರಿನಲ್ಲಿರುವ ಕುರಿತು ಪಕ್ಕದಲ್ಲಿದ್ದವರು ಹೇಳಿದರೂ ಹೆತ್ತವರು ಕೇಳಿಸಿಕೊಂಡಿರಲಿಲ್ಲ. ನಂತರ ಸ್ಥಳೀಯರು ಬಲವಂತದಿಂದ ಬಾಲಕನನ್ನು ನೀರಿನಿಂದ ಹೊರತೆಗೆದಿದ್ದರು. ಹೆತ್ತವರ ಜೊತೆಗಿದ್ದ ಮಹಿಳೆ ಈ ಸಂದರ್ಭ ರಾದ್ಧಾಂತಗೈದಿದ್ದಳಲ್ಲದೆ ಬಾಲಕನನ್ನು ನೀರಿನಿಂದ ಹೊರತಂದವರ ಮೇಲೆ ಹಲ್ಲೆಗೂ ಯತ್ನಿಸಿದ್ದಳು. ಬಾಲಕನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತ ಮೃತಪಟ್ಟಿದ್ದಾನೆಂದು ವೈದ್ಯರು ಘೋಷಿಸಿದರು.

ಮಗು ಖಂಡಿತಾ ಜೀವಂತವಾಗಿ ಹೊರಬರುತ್ತಾನೆಂದು ಆತನ ಹೆತ್ತವರ ಜೊತೆಗಿದ್ದ ಮಹಿಳೆ ಹೇಳುತ್ತಿರುವುದು ಒಂದು ವೀಡಿಯೋದಲ್ಲಿ ಕೇಳಿಸುತ್ತದೆ.

ಬಾಲಕನಿಗೆ ದಿಲ್ಲಿಯ ಖ್ಯಾತ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗಿತ್ತು ಆದರೆ ಆತ ಬದುಕುಳಿಯುವ ಸಾಧ್ಯತೆಯಿಲ್ಲ ಎಂದು ವೈದ್ಯರು ಹೇಳಿದ್ದರೆಂದು ಹೆತ್ತವರು ಹೇಳಿದ್ಧಾರೆಂದು ಪೊಲೀಸರು ತಿಳಿಸಿದ್ದಾರೆ. ಬಾಲಕನ ವೈದ್ಯಕೀಯ ವರದಿಗಳನ್ನು ತರಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಆತನ ಹೆತ್ತವರು ಮತ್ತು ಸಂಬಂಧಿ ಮಹಿಳೆಯನ್ನು ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News